ADVERTISEMENT

ಮಂಡ್ಯ: ‘ತಬರ’ಳಂತಾದ ಸೈನಿಕನ ಪತ್ನಿ

ಮಂಡ್ಯ: 25 ವರ್ಷಗಳಿಂದ ಜಮೀನಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ

ಸಿದ್ದು ಆರ್.ಜಿ.ಹಳ್ಳಿ
Published 30 ಮೇ 2025, 3:56 IST
Last Updated 30 ಮೇ 2025, 3:56 IST
ಸುಂದರೇಶ್‌, ಮೃತ ಸೈನಿಕ 
ಸುಂದರೇಶ್‌, ಮೃತ ಸೈನಿಕ    
ಜಮೀನು ನೀಡಲು ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ | ಸಂಕಷ್ಟದಲ್ಲೂ ಮಗಳನ್ನು ಬಿಇ ಓದಿಸಿದ ತಾಯಿ |  ನಿವೇಶನ ನೀಡಲು ಜಿಲ್ಲಾಧಿಕಾರಿಗೆ ಸೂಚನೆ 

ಮಂಡ್ಯ: ‘ದೇಶ ಸೇವೆಗೆ ಹೋದ ಪತಿ ಮರಳಿ ಬರಲಿಲ್ಲ. ಮಾಜಿ ಸೈನಿಕನ ಕೋಟಾದಡಿ ಸಿಗಬೇಕಾದ ಜಮೀನಿಗೆ 25 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಅಧಿಕಾರಿಗಳ ಮನಸ್ಸು ಕರಗಲಿಲ್ಲ. ಸೂರಿಲ್ಲದೆ, ಜಮೀನಿಲ್ಲದೆ ನರಕ ಅನುಭವಿಸುತ್ತಿದ್ದೇವೆ’ ಎಂದು ಮೃತ ಸೈನಿಕನ ಪತ್ನಿ ಗೀತಾ ಕಣ್ಣೀರಿಟ್ಟರು.

ಕೆ.ಆರ್‌. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದ ಎಲ್‌.ಬಿ. ಸುಂದರೇಶ್‌ ಸೇನೆಯಲ್ಲಿ ಯೋಧರಾಗಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ 2000ನೇ ಸಾಲಿನಲ್ಲಿ ನಡೆದ ಉಗ್ರರ ಗ್ರೆನೇಡ್‌ ದಾಳಿಯಲ್ಲಿ ವೀರಮರಣ ಹೊಂದಿದರು.

ಸುಂದರೇಶ್‌ ಅವರೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದ ಹಾಸನ ಜಿಲ್ಲೆಯ ಬ್ಯಾಡರಹಳ್ಳಿಯ ಗೀತಾ ಅವರ ಕನಸುಗಳು ಮದುವೆಯಾದ ಎರಡೂವರೆ ವರ್ಷಕ್ಕೇ ನುಚ್ಚು ನೂರಾದವು. ಸರ್ಕಾರಿ ಸೌಲಭ್ಯಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ.

ADVERTISEMENT

ನೀವೇ ಜಾಗ ಹುಡುಕಿ:

‘ಜಮೀನು ಕೊಟ್ಟರೆ ಕೃಷಿ ಮಾಡಿ, ಸೂರು ಕಟ್ಟಿಕೊಂಡು ಬದುಕು ಸಾಗಿಸುತ್ತೇನೆ ಎಂದು ಅಧಿಕಾರಿಗಳನ್ನು ಅಂಗಲಾಚಿದ್ದೇನೆ. ಎಲ್ಲಿಯೂ ಸರ್ಕಾರಿ ಜಮೀನು ಲಭ್ಯವಿಲ್ಲ. ನೀವೇ ಹುಡುಕಿಕೊಡಿ, ಮಂಜೂರು ಮಾಡುತ್ತೇವೆ ಎಂದು ಸಬೂಬು ಹೇಳುತ್ತಾರೆ. ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದೇನೆ. ಆದರೂ, ನನ್ನ ಅರ್ಜಿಗೆ ಪರಿಹಾರ ಸಿಕ್ಕಿಲ್ಲ’ ಎಂದು ಗೀತಾ ಅಳಲು ತೋಡಿಕೊಂಡರು.

‘ಕೆ.ಆರ್‌. ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿಯ ಶ್ರವಣನಹಳ್ಳಿ ಗ್ರಾಮದ ಸ.ನಂ.48ರಲ್ಲಿ 8 ಎಕರೆ ಸರ್ಕಾರಿ ಗೋಮಾಳವಿದ್ದು, ಅದನ್ನು ಮಂಜೂರು ಮಾಡಿಕೊಡಿ’ ಎಂದು ಗೀತಾ ಅವರು ಕೆ.ಆರ್‌.ಪೇಟೆ ತಹಶೀಲ್ದಾರ್‌ ಕಚೇರಿಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು.

‘ಈ ಪ್ರದೇಶದಲ್ಲಿ ಸಾರ್ವಜನಿಕರು ಅಕ್ರಮವಾಗಿ ಉಳುಮೆ ಮಾಡುತ್ತಿದ್ದು, ಅಕ್ರಮ–ಸಕ್ರಮ ಕೋರಿ ಅರ್ಜಿಯನ್ನೂ ಹಾಕಿಕೊಂಡಿದ್ದಾರೆ. ಜೊತೆಗೆ ಈ ಜಾಗ ಜಾನುವಾರು ಮೇವಿಗೆ ಮೀಸಲಾಗಿದೆ. ಹೀಗಾಗಿ ಮಂಜೂರು ಮಾಡಲು ಜಮೀನು ಲಭ್ಯವಿಲ್ಲ’ ಎಂದು ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. 

‘ನನಗೆ ತವರು ಮನೆಯ ಆಶ್ರಯ ಸಿಗದಿದ್ದರೆ ಇಷ್ಟೊತ್ತಿಗೆ ಬೀದಿ ಪಾಲಾಗುತ್ತಿದ್ದೆ. ತಂದೆ–ತಾಯಿ ನೆರವು ಮತ್ತು ಪತಿಯ ಪಿಂಚಣಿ ಹಣದಿಂದ ನನ್ನ ಮಗಳನ್ನು ಬಿ.ಇ. ಓದಿಸಿದ್ದೇನೆ. ಮಗಳು ಉದ್ಯೋಗದ ಹುಡುಕಾಟದಲ್ಲಿದ್ದಾಳೆ. ನಾನು ಇನ್ನೂ ಜಮೀನಿಗಾಗಿ ಜಾಗ ಹುಡುಕುತ್ತಿದ್ದೇನೆ’ ಎಂದು ಗೀತಾ ಅವರು ಗದ್ಗದಿತರಾದರು.

ಗೀತಾ 

‘ಅಧಿಕಾರಿಗಳಿಗೆ ಆತ್ಮಸಾಕ್ಷಿ ಇಲ್ಲವೇ?’

‘ದೇಶಸೇವೆ ಮಾಡಿದ ಸೈನಿಕನ ಕುಟುಂಬಕ್ಕೆ ಜಾಗ ಕೊಡದೆ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳಿಗೆ ಆತ್ಮಸಾಕ್ಷಿ ಇಲ್ಲವೇ? ನಿಮ್ಮ ಸಹೋದರಿಗೆ ಈ ಪರಿಸ್ಥಿತಿ ಬಂದಿದ್ದರೆ ಇದೇ ರೀತಿ ನಡೆದುಕೊಳ್ಳುತ್ತಿದ್ರಾ? ವಿಧವೆಯ ಕಣ್ಣಲ್ಲಿ ನೀರು ಹಾಕಿಸಲು ನಿಮಗೆ ನಾಚಿಕೆ ಆಗುವುದಿಲ್ಲವೇ?’ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಂಡ್ಯದಲ್ಲಿ ಗುರುವಾರ ದೂರು ಅರ್ಜಿಗಳ ವಿಚಾರಣೆ ವೇಳೆ ಗೀತಾ ಅವರ ಅರ್ಜಿಯನ್ನು ನೋಡಿದ ಅವರು ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡರು. ‘ಕಾನೂನುಬದ್ಧವಾಗಿ ಕೊಡಬೇಕಾದ ಜಮೀನು ಕೊಟ್ಟಿಲ್ಲವೆಂದರೆ ನಾವೆಲ್ಲ ತಲೆ ತಗ್ಗಿಸಬೇಕು. ಕೆ.ಆರ್‌.ಪೇಟೆಯಲ್ಲಿ ಹೊಸ ಬಡಾವಣೆಯಾಗುತ್ತಿದ್ದು 30x40 ಚ.ಅಡಿಯ ನಿವೇಶನ ಮಂಜೂರು ಮಾಡಿ 3 ತಿಂಗಳಲ್ಲಿ ವರದಿ ನೀಡಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.