ADVERTISEMENT

ಕಿಕ್ಕೇರಿ: ಡಿಎನ್‌ಎ ಪರೀಕ್ಷೆಗಾಗಿ ಹೂತಿದ್ದ ಶವ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:30 IST
Last Updated 2 ಸೆಪ್ಟೆಂಬರ್ 2025, 2:30 IST
ಕಿಕ್ಕೇರಿ ಸ್ಮಶಾನದಲ್ಲಿ ‘ಅನಾಥ ವ್ಯಕ್ತಿ’ ಎಂದು ಪೊಲೀಸರು ಹೂತು ಹಾಕಿದ್ದ ಶವವನ್ನು ಡಿ‌ಎನ್‌ಎ ಪರೀಕ್ಷೆಗಾಗಿ ಹೊರತೆಗೆಯಲಾಯಿತು 
ಕಿಕ್ಕೇರಿ ಸ್ಮಶಾನದಲ್ಲಿ ‘ಅನಾಥ ವ್ಯಕ್ತಿ’ ಎಂದು ಪೊಲೀಸರು ಹೂತು ಹಾಕಿದ್ದ ಶವವನ್ನು ಡಿ‌ಎನ್‌ಎ ಪರೀಕ್ಷೆಗಾಗಿ ಹೊರತೆಗೆಯಲಾಯಿತು    

ಕಿಕ್ಕೇರಿ: ಅನಾಥ ವ್ಯಕ್ತಿ ಎಂದು ಇಲ್ಲಿನ ಸ್ಮಶಾನದಲ್ಲಿ ಪೊಲೀಸರು ಹೂತಿದ್ದ ಶವವನ್ನು ಡಿ‌ಎನ್‌ಎ ಪರೀಕ್ಷೆಗಾಗಿ ಸೋಮವಾರ ಹೊರತೆಗೆಯಲಾಯಿತು.

ಕಳೆದ ವರ್ಷ ಹೋಬಳಿಯ ಗಡಿಭಾಗದ ಭಾರತೀಪುರ ಹೇಮಾವತಿ ನಾಲೆಯಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿತ್ತು. ಈ ಸ್ಥಳದಲ್ಲಿದ್ದ ನಾಗರಿಕರು ನೀಡಿದ ಮಾಹಿತಿ ಮೇರೆಗೆ ಕಿಕ್ಕೇರಿ ಪೊಲೀಸರು ನಾಲೆಯಿಂದ ಶವ ಹೊರ ತೆಗೆದು ಪಂಚಾನಾಮೆ ನಡೆಸಿ ‘ಅನಾಥ ಶವ’ ಎಂದು ಹೂತು ಹಾಕಿದ್ದರು.

ಇದೇ ವೇಳೆ ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯಕೊಪ್ಪಲು ಗ್ರಾಮದ ಶೀಲಾ ಎನ್ನುವವರು ತನ್ನ ಮಗ ಪ್ರಜ್ವಲ್ (24) ಕಾಣೆಯಾಗಿರುವ ಸಂಬಂಧ ಶ್ರವಣಬೆಳಗೊಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸಾಲಗಾರರ ಭಯಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. 

ADVERTISEMENT

ಹೂತಿರುವ ಶವ ಹೊರತೆಗೆದು ಡಿ‌ಎನ್‌ಎ ಪರೀಕ್ಷೆ ಮಾಡಿ, ಮೂಲ ವಾರಸುದಾರರಿಗೆ ನ್ಯಾಯ ದೊರಕಿಸಿಕೊಡಲು ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜೆ‌ಎಂಎಫ್‌ಸಿ ನ್ಯಾಯಾಲಯ ಈಚೆಗೆ ಆದೇಶ ನೀಡಿತ್ತು.

ಮೃತ ವ್ಯಕ್ತಿಯ ವಾರಸುದಾರರು ಎನ್ನಲಾದ ಶೀಲಾ, ಕಿಕ್ಕೇರಿ ಎ‌ಎಸ್‌ಐ ಶಿವಲಿಂಗಯ್ಯ, ಶ್ರವಣಬೆಳಗೊಳ ಎಸ್‌ಐ ನವೀನ್‌ಕುಮಾರ್, ತಹಶೀಲ್ದಾರ್ ಅಶೋಕ್, ಆರೋಗ್ಯ ಇಲಾಖೆಯ ವಿಧಿವಿಜ್ಞಾನ ವೈದ್ಯರ ತಂಡದ ಸಮ್ಮುಖದಲ್ಲಿ ಶವವನ್ನು ಗುಂಡಿಯಿಂದ ಹೊರತೆಗೆಯಲಾಯಿತು.

ಶವದ ಕೈ, ಮೂಳೆ, ಹಲ್ಲು ಮತ್ತಿತರ ಅಂಗಾಂಗಗಳನ್ನು ಡಿ‌ಎನ್‌ಎ ಪರೀಕ್ಷೆಗಾಗಿ ಸಂಗ್ರಹಿಸಿ, ವಿಧಿವಿಜ್ಞಾನ ಪರೀಕ್ಷೆಗೆ ಬೆಂಗಳೂರಿನ ಲ್ಯಾಬ್‌ಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.