ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂ.ಎಸ್.ಪಿ) ಜನವರಿ 1ರಂದು ಆರಂಭವಾಗಬೇಕಿದ್ದ ಭತ್ತ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ 13 ದಿನ ಕಳೆದರೂ ಬಾಗಿಲು ತೆರೆದಿಲ್ಲ. ಮಾರುಕಟ್ಟೆಗೆ ದಲ್ಲಾಳಿಗಳು ದಾಂಗುಡಿ ಇಟ್ಟಿದ್ದು, ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭತ್ತ ಮತ್ತು ರಾಗಿ ಖರೀದಿಸುವ ಸಂಬಂಧ ಜಿಲ್ಲೆಯಲ್ಲಿ 34 ನೋಂದಣಿ ಕೇಂದ್ರಗಳನ್ನು ಡಿಸೆಂಬರ್ ಮೊದಲ ವಾರದಿಂದಲೇ ತೆರೆದಿದ್ದು, ಜನವರಿ 31ರವರೆಗೆ ಕಾಲಾವಕಾಶವಿದೆ. ನೋಂದಣಿ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಕೇವಲ 1,167 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಮೂರ್ನಾಲ್ಕು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ವರ್ಷ ನೋಂದಣಿಗೆ ರೈತರು ನಿರಾಸಕ್ತಿ ತೋರುತ್ತಿರುವುದು ಕಂಡು ಬರುತ್ತದೆ.
2020–21ರಲ್ಲಿ 29 ಸಾವಿರ, 2021–22ರಲ್ಲಿ 40 ಸಾವಿರ, 2022–23ರಲ್ಲಿ 17 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದರು. 2023–24ನೇ ಸಾಲಿನಲ್ಲಿ ಬರಗಾಲದ ಹಿನ್ನೆಲೆ ಮತ್ತು ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗೆ ನೀರು ಬಿಡದ ಹಿನ್ನೆಲೆಯಲ್ಲಿ ರೈತರು ಬೇಸಿಗೆ ಬೆಳೆ ಬೆಳೆದಿರಲಿಲ್ಲ. ಹೀಗಾಗಿ ಭತ್ತ ಖರೀದಿ ಕೇಂದ್ರ ತೆರೆದಿರಲಿಲ್ಲ.
‘ಭತ್ತದ ಕಟಾವು ಆರಂಭವಾದ ತಕ್ಷಣ ಖಾಸಗಿ ಮಧ್ಯವರ್ತಿಗಳು ರೈತರ ತಾಕಿಗೆ ಬಂದು ಭತ್ತವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಾರೆ. ಕಳೆದ ವರ್ಷ ಮುಂಚಿತವಾಗಿ ಸರ್ಕಾರದವರು ಖರೀದಿ ಕೇಂದ್ರಗಳನ್ನು ತೆರೆದಿದ್ದರು. ಆಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ ₹3,000 ದಿಂದ ₹3,200 ಇತ್ತು. ಈ ವರ್ಷ ₹1,800 ದಿಂದ ₹2,000ವರೆಗೆ ದರದಲ್ಲಿ ಮಾರಾಟವಾಗುತ್ತಿದ್ದು, ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ ಹೆಚ್ಚು ನಷ್ಟವಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ದೂರಿದ್ದಾರೆ.
ಹೊಲದಲ್ಲೇ ಖರೀದಿ: ‘ಜಿಲ್ಲೆಯಲ್ಲಿರುವ ಸುಮಾರು 250 ರೈಸ್ ಮಿಲ್ ಮಾಲೀಕರು ಮತ್ತು ದಲ್ಲಾಳಿಗಳು ಹೊಲಗಳಿಗೆ ಹೋಗಿ ಭತ್ತ ಖರೀದಿ ಮಾಡುತ್ತಿದ್ದಾರೆ. ಎಂ.ಎಸ್.ಪಿ. ದರಕ್ಕಿಂತ ತುಸು ಕಡಿಮೆ ದರಕ್ಕೆ ಖರೀದಿಸುತ್ತಿದ್ದರೂ, ಎಂಎಸ್‌ಪಿ ಕೇಂದ್ರಕ್ಕೆ ಭತ್ತ ಸಾಗಣೆ ಮಾಡುವ ವೆಚ್ಚ ಮತ್ತು ಕೂಲಿಕಾರ್ಮಿಕರ ದಿನಗೂಲಿ ರೈತರಿಗೆ ಉಳಿಯುತ್ತಿದೆ. ಹೀಗಾಗಿ ಎಂಎಸ್‌ಪಿ ನೋಂದಣಿಗೆ ರೈತರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಸಾಫ್ಟ್‌ವೇರ್‌ನಿಂದ ವಿಳಂಬ: ‘ಜಿಲ್ಲೆಯಲ್ಲಿ ಭತ್ತ, ರಾಗಿ ನೋಂದಣಿ ಮತ್ತು ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರಗಳನ್ನು ಗುರುತಿಸಲಾಗಿದೆ. ನೋಂದಣಿ ತಂತ್ರಾಂಶ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ ಖರೀದಿಗೆ ಸಂಬಂಧಿಸಿದ ತಂತ್ರಾಂಶವನ್ನು ಸರ್ಕಾರ ಬಿಡುಗಡೆ ಮಾಡದ ಕಾರಣ ಎಂ.ಎಸ್.ಪಿ. ಯೋಜನೆಯಡಿ ಖರೀದಿ ವಿಳಂಬವಾಗಿದೆ’ ಎನ್ನುತ್ತವೆ ಇಲಾಖೆ ಮೂಲಗಳು.
ಭತ್ತ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖರೀದಿ ಕೇಂದ್ರ ಗುರುತಿಸಿದ್ದು ಶೀಘ್ರ ತೆರೆಯಲಾಗುವುದು. ರೈತರು ಆತಂಕ ಪಡುವುದು ಬೇಡ–ಕುಮಾರ, ಜಿಲ್ಲಾಧಿಕಾರಿ
ನವೆಂಬರ್ ಕೊನೆಯಲ್ಲಿ ಸುಗ್ಗಿ ಆರಂಭವಾಗಿ ಬಹಳಷ್ಟು ರೈತರು ಈಗಾಗಲೇ ಭತ್ತ ಮಾರಿಕೊಂಡಿದ್ದಾರೆ. ಖರೀದಿ ಕೇಂದ್ರ ವಿಳಂಬವೇ ರೈತರು ನೋಂದಣಿಗೆ ನಿರಾಸಕ್ತಿ ತೋರಲು ಕಾರಣ–ಎ.ಎಲ್.ಕೆಂಪೂಗೌಡ, ರೈತ ಮುಖಂಡ
ಭತ್ತ ಖರೀದಿ ಕೇಂದ್ರ ತೆರೆಯುವುದನ್ನು ಸರ್ಕಾರ ವಿಳಂಬ ಮಾಡುವ ಮೂಲಕ ರೈಸ್ ಮಿಲ್ ಮಾಲೀಕರಿಗೆ ಅನುಕೂಲ ಕಲ್ಪಿಸುವ ಹುನ್ನಾರ ನಡೆಸಿದೆ. ನಿಗದಿತ ವೇಳೆಯಲ್ಲಿ ಖರೀದಿ ಕೇಂದ್ರ ಆರಂಭವಾಗಿದ್ದರೆ ರೈತರಿಗೆ ಉತ್ತಮ ದರ ಸಿಗುತ್ತಿತ್ತು. ಎಂಎಸ್‌ಪಿ ದರ ಕ್ವಿಂಟಲ್‌ಗೆ ₹2300 ನಿಗದಿ ಮಾಡಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಕನಿಷ್ಠ ₹3,500 ನಿಗದಿಪಡಿಸಬೇಕು. ಭತ್ತ ಮಾರಿದ ನಂತರ ಸರ್ಕಾರದಿಂದ 6 ತಿಂಗಳಾದರೂ ಹಣ ಬಿಡುಗಡೆಯಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ರೈತರು ಎಂಎಸ್‌ಪಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.–ಶಂಭೂನಹಳ್ಳಿ ಸುರೇಶ್, ರೈತ ಮುಖಂಡ
ಕನಿಷ್ಠ ಬೆಂಬಲ ಬೆಲೆ ₹2,300 ಇದ್ದರೂ, ದಲ್ಲಾಳಿಗಳು ಪ್ರತಿ ಕ್ವಿಂಟಲ್ ಭತ್ತಕ್ಕೆ ಕೇವಲ ₹1,800 ದರ ನಿಗದಿ ಮಾಡಿದ್ದಾರೆ. ಕೃಷಿ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ರೈತರ ಸಂಕಷ್ಟ ಅರಿತಿಲ್ಲ. ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಸುಮಾರು 50 ಲಕ್ಷ ಕ್ವಿಂಟಲ್ ಸಂಗ್ರಹವಾಗಿದೆ. ಆದರೆ ಖರೀದಿ ಕೇಂದ್ರವಿಲ್ಲದೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ–ಎನ್.ಎಲ್. ಭರತ್‌ರಾಜ್, ಜಿಲ್ಲಾ ಸಂಚಾಲಕ, ಕರ್ನಾಟಕ ಪ್ರಾಂತ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.