ADVERTISEMENT

‘ರಾಹುಲ್‌ ಪ್ರಧಾನಿಯಾಗಲು ನಿಖಿಲ್ ಬೆಂಬಲಿಸಿ’

ಮತದಾರರಲ್ಲಿ ಸಚಿವ ಜಿ.ಟಿ.ದೇವೇಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 17:47 IST
Last Updated 4 ಏಪ್ರಿಲ್ 2019, 17:47 IST
ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಖಂಡರೊಡನೆ ಮಾತನಾಡಿದರು
ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಖಂಡರೊಡನೆ ಮಾತನಾಡಿದರು   

ಮಳವಳ್ಳಿ: ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕೆಂದು ಜೆಡಿಎಸ್ - ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವು ದರಿಂದ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಅರಿತುಕೊಂಡು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕುಂದೂರು, ಪಂಡಿತಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ಥಳೀಯ ಮುಖಂಡರು, ಸಂಘ–ಸಂಸ್ಥೆಗಳ ಮುಖಂಡರನ್ನು ಸಂಪರ್ಕಿಸಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಡನೆ ಮಾತನಾಡಿ, ನಿಖಿಲ್‌ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನ ಒಂದೊಂದು ಮತ ರಾಹುಲ್ ಗಾಂಧಿ ಪ್ರಧಾನಿ ಯಾಗುವುದಕ್ಕೆ ಶಕ್ತಿ ತುಂಬಲಿದೆ ಎಂದರು.

ADVERTISEMENT

ಅಂಬರೀಷ್ ಅವರನ್ನು ಸುಮಲತಾ ಅವರು ಮದುವೆಯಾಗಿದ್ದು ಅವರು ಆ ಕುಟುಂಬದ ಹೆಣ್ಣು ಮಗಳು. ಅವರ ಬಗ್ಗೆ ಶಿವರಾಮೇಗೌಡರು ಮಾತನಾಡಿರುವುದನ್ನು ಯಾರೂ ಕೂಡ ಒಪ್ಪುವುದಿಲ್ಲ. ಅಭ್ಯರ್ಥಿ ಬಗ್ಗೆ ಆಗಲಿ, ಚುನಾವಣಾ ಪ್ರಚಾರಕ್ಕೆ ಬರುವಂತಹ ಸಿನಿಮಾ ನಟ- ನಟಿಯವರ ಬಗ್ಗೆಯಾಗಲಿ ಎಲ್ಲರೂ ಗೌರವಯುತವಾಗಿ ಕಾಣಬೇಕೆಂದು ಹಾಗೂ ಅವರ ಮನಸ್ಸಿಗೆ ನೋವಾಗುದಂತೆ ಹೇಳಿಕೆಗಳನ್ನು ಕೊಡ ಕೂಡದು ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆಂದು ಹೇಳಿದರು.

ಇಂದಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸಮಸ್ಯೆ ಗಳು ಕಂಡು ಬರುತ್ತಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾಗಿ ರುವುದರಿಂದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕಳೆದ ರಾತ್ರಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ತಿಳಿಸಿದ್ದಾರೆ. ಈಗಾಗಲೇ ಮಾಜಿ ಶಾಸಕ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಅವರೊಡನೆ ಮಾತನಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜತೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.

ಶಾಸಕರ ಬಗ್ಗೆ ಅಸಮಾಧಾನ: ತಾಲ್ಲೂಕಿನ ಕುಂದೂರು ಗ್ರಾಮದ ಜೆಡಿಎಸ್ ಮುಖಂಡ ನಂಜೇಗೌಡ ಅವರ ಪುತ್ರಿ ಇತ್ತೀಚೆಗೆ ಮೃತಪಟ್ಟಿದ್ದು, ಈ ಬಗ್ಗೆ ಶಾಸಕ ಅನ್ನದಾನಿ ಅವರು ಮನೆಗೆ ಬಂದು ಸಾಂತ್ವನ ಹೇಳಿಲ್ಲವೆಂದು ನಂಜೇಗೌಡ ಅಸಮಾಧಾನಗೊಂಡಿದ್ದರು. ಅವರ ಮನೆಗೆ ಸಚಿವ ಜಿ.ಟಿ. ದೇವೇಗೌಡ ಭೇಟಿ ನೀಡಿದ್ದರು. ಮನೆಯಲ್ಲಿ ನಂಜೇಗೌಡರು ಇಲ್ಲದಿರುವುದನ್ನು ಕಂಡ ಸಚಿವರು ದೂರವಾಣಿಯ ಮೂಲಕ ಸಂಪರ್ಕಿ ಸಲು ಮುಂದಾದರೂ ಕರೆ ಸ್ವೀಕರಿಸಲಿಲ್ಲ ವಾದ್ದರಿಂದ ಕುಟುಂಬದ ವರಿಗೆ ಸಾಂತ್ವನ ಹೇಳಿದರು.

ಅನುಮತಿ ಪಡೆದಿಲ್ಲ: ಅಸಮಾಧಾನ
ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಮೈತ್ರಿ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತಿದ್ದು, ಚುನಾವಣೆ ಆಯೋಗದಿಂದ ಯಾವುದೇ ಅನುಮತಿ ಪಡೆದಿಲ್ಲ. ಸಭೆ ಸಮಾರಂಭ ಮಾಡಿದರೂ ವಿಡಿಯೊ ರೆಕಾರ್ಡ್‌ ಮಾಡುವ ಚುನಾವಣೆ ಆಯೋಗದ ಅಧಿಕಾರಿಗಳು ಯಾರೂ ಕಂಡು ಬಾರದಿರುವುದಕ್ಕೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಚಂದ್ರಮೌಳಿ ಅವರನ್ನು ಸ್ಟಷ್ಟನೆ ಕೇಳಲು ದೂರವಾಣಿಯ ಮೂಲಕ ಸಂಪರ್ಕಿಸಲು ಮುಂದಾದಾಗ ಸಭೆ ನಡೆಸುವುದಕ್ಕೆ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದರು.

ಸಚಿವ ಜಿ.ಟಿ.ದೇವೇಗೌಡರು ಬೆಳಿಗ್ಗೆ 11 ಗಂಟೆಯಿಂದಲೇ ಮತ ಪ್ರಚಾರ ನಡೆಸಿದ್ದು, ಅನುಮತಿ ಪಡೆಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಎಚ್ಚೆತ್ತುಕೊಂಡ ತಹಶೀಲ್ದಾರ್ ಮಧ್ಯಾಹ್ನ 2 ಗಂಟೆಯ ನಂತರ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಶಾಸಕ ಡಾ. ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.