ಶ್ರೀರಂಗಪಟ್ಟಣ: ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ವಿವಿಧೆಡೆ ಹಳ್ಳ ಮತ್ತು ಕಾಲುವೆಗಳು ಉಕ್ಕಿ ಹರಿದು ನೂರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದೆ.
ತಾಲ್ಲೂಕಿನ ದರಸಗುಪ್ಪೆ ಬಳಿ ಸಿಡಿಎಸ್ ನಾಲೆಯ ಏರಿ ಒಡೆದು ಅಡ್ಡಹಳ್ಳ ಉಕ್ಕೇರಿ ಹರಿದಿದೆ. ತೆಂಗು, ಅಡಿಕೆ, ಬಾಳೆ, ಕಬ್ಬು, ಭತ್ತ, ಜೋಳ ಇತರ ಬೆಳೆಗಳು ಜಲಾವೃತವಾಗಿವೆ. ನೀರಿನ ರಭಸಕ್ಕೆ ಕೂಡಲಕುಪ್ಪೆ ಗೇಟ್‌ನಿಂದ ಕೂಡಲಕುಪ್ಪೆ, ಬಲ್ಲೇನಹಳ್ಳಿ, ಚಂದಗಿರಿಕೊಪ್ಪಲು, ಹನುಮಂತನಗರ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ.
ತಾಲ್ಲೂಕಿನ ಬೆಳಗೊಳ ಬಳಿ ಕರಿಯಮ್ಮನ ಹಳ್ಳಿ ತುಂಬಿ ಹರಿದು ಕರಿಯಮ್ಮನ ದೇವಾಲಯ ಜಲಾವೃತವಾಗಿದೆ. ದೇವಾಲಯದ ಸುತ್ತ ಎರಡು ಅಡಿಗಳಷ್ಟು ನೀರು ಹರಿದಿದೆ. ಕರಿಯಮ್ಮನ ಹಳ್ಳದ ನೀರು ದೇವರಾಯ ನಾಲೆಗೆ ಧುಮುಕಿ ಅಲ್ಲಿಂದ ಕೃಷಿ ಜಮೀನಿಗೂ ನುಗ್ಗಿದೆ. ಭತ್ತ ಇತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶ ಮತ್ತು ಇನ್ಫೋಸಿಸ್ ಕಡೆಯಿಂದ ಅಪಾರ ಪ್ರಮಾಣ ನೀರು ಇತ್ತ ಹರಿದು ಬಂದಿದೆ. ‘ಕರಿಯಮ್ಮನ ಹಳ್ಳಿ ಒತ್ತುವರಿಯಾಗಿರುವ ಕಾರಣ ಕೃಷಿ ಭೂಮಿಗೆ ನೀರು ನುಗ್ಗಿದೆ’ ಎಂದು ಬೆಳಗೊಳ ವಿಷಕಂಠು ಹೇಳಿದರು.
ತಾಲ್ಲೂಕಿನ ಮೇಳಾಪುರ, ಹೆಬ್ಬಾಡಿ, ಹೆಬ್ಬಾಡಿಹುಂಡಿ ಗ್ರಾಮಗಳ ಬಳಿ ವಿರಿಜಾ ನಾಲೆ ತುಂಬಿ ಹರಿದು 30 ಎಕರೆಗೂ ಹೆಚ್ಚು ಭತ್ತದ ಬೆಳೆ ಜಲಾವೃತವಾಗಿದೆ. ಮೈಸೂರಿನ ಕೆಸರೆ ಇತರ ಭಾಗದಿಂದ ಬಂದ ನೀರು ವಿರಿಜಾ ನಾಲೆಗೆ ಬಿದ್ದಿದೆ. ದೇವರಾಜ ಅರಸು ನಾಲೆಯ ಹೆಚ್ಚುವರಿ ನೀರು ಕೂಡ ಇತ್ತ ಬಂದಿದ್ದು, ವಿರಿಜಾ ನಾಲೆಯ ಉಳ್ಳಾಣಿಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿದು ಕೃಷಿ ಜಮೀನಿಗೆ ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ನೀರಾವರಿ ಇಲಾಖೆ ಎಂಜಿನಿಯರ್‌ಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ವಿರಿಜಾ ನಾಲೆಯ 33ನೇ ಮೈಲಿಯಲ್ಲಿ ನೀರು ಉಕ್ಕಿ ಹರಿದು ಭತ್ತದ ಬೆಳೆ ಮೇಲೆ ಅಪಾರ ಪ್ರಮಾಣದ ಮಣ್ಣು ತುಂಬಿಕೊಂಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಮೈಸೂರಿನಿಂದ ಇತ್ತ ಹರಿದು ಬರುವ ನೀರನ್ನು ತಡೆಯಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಮೇಳಾಪುರ ಗ್ರಾಮದ ರೈತ ಲಕ್ಷ್ಮಣ ಆಗ್ರಹಿಸಿದರು.
ಅಧಿಕಾರಿಗಳ ಭೇಟಿ: ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಮಳೆಯಿಂದ ಹಾನಿ ಸಂಭವಿಸಿರುವ ಕೂಡಲಕುಪ್ಪೆ, ದರಸಗುಪ್ಪೆ ಇತರ ಸ್ಥಳಗಳಿಗೆ ಭೇಟಿ ನೀಡಿತ್ತು. ನಾಲೆಗಳಲ್ಲಿ ತಕ್ಷಣ ನೀರು ನಿಲ್ಲಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಹಳ್ಳ ಮತ್ತು ನಾಲೆಗಳಲ್ಲಿ ನೀರಿನ ಹರಿವು ತಗ್ಗಿದ ಕೂಡಲೇ ದುರಸ್ತಿ ಕಾಮಗಾರಿ ಆರಂಭಿಸಬೇಕು. ಬೆಳೆ ಹಾನಿಯ ಬಗ್ಗೆ ವಸ್ತುನಿಷ್ಠ ವರದಿ ಸಿದ್ದಪಡಿಸಿ ಕಳುಹಿಸಿಕೊಡಬೇಕು’ ಎಂದು ಬಿ.ಸಿ. ಶಿವಾನಂದಮೂರ್ತಿ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಕಿರಂಗೂರು ಬಳಿ ಬಿಡುಗಂಡಿ ನಾಲೆ (ಕುಂಬಾರಗುಂಡಿ ನಾಲೆ) ಕೂಡ ಭಾರಿ ಮಳೆಯಿಂದಾಗಿ ತುಂಬಿ ಹರಿದಿದೆ. ನಾಲೆಯ ಏರಿ ಅಲ್ಲಲ್ಲಿ ಶಿಥಿಲವಾಗಿದೆ. ‘ಈ ಸಂಪರ್ಕ ನಾಲೆಯನ್ನು ಈಚೆಗೆ ಕಾಂಕ್ರೀಟೀಕರಣ ಮಾಡಲಾಗಿದೆ. 20 ಅಡಿಗೂ ಹೆಚ್ಚು ಅಗಲದ ನಾಲೆಯನ್ನು ಕೇವಲ 8 ಅಡಿಗೆ ಸೀಮಿತಗೊಳಿಸಲಾಗಿದೆ. ಇದರಿಂದ ಹೆಚ್ಚುವರಿ ನೀರು ಏರಿ ಮೇಲೆ ಹರಿಯುತ್ತಿದೆ’ ಎಂದು ಬಾಬುರಾಯನಕೊಪ್ಪಲು ರೈತ ಬಿ.ಎಸ್.ರಮೇಶ್ ದೂರಿದರು.
‘ತಾಲ್ಲೂಕಿನ ದರಸಗುಪ್ಪೆ, ಕಿರಂಗೂರು, ಚಂದಗಾಲು, ನಗುವನಹಳ್ಳಿ, ಮೇಳಾಪುರ, ಹೆಬ್ಬಾಡಿಹುಂಡಿ ಇತರ ಕಡೆ ನೂರು ಎಕರೆಗೂ ಹೆಚ್ಚು ಬೆಳೆ ಹಾನಿ ಸಂಭವಿಸಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ನಷ್ಟದ ವರದಿ ಪಡೆಯಲಾಗುವುದು’ ಎಂದು ತಹಶೀಲ್ದಾರ್ ಚೇತನಾ ಯಾದವ್ ತಿಳಿಸಿದರು.
ಶಾಸಕ ಭೇಟಿ– ಪರಿಹಾರದ ಭರವಸೆ: ಸಿಡಿಎಸ್ ನಾಲೆ ಒಡೆದಿರುವ ದರಸಗುಪ್ಪೆ ಹಾಗೂ ಬೆಳೆ ಹಾನಿ ಸಂಭವಿಸಿರುವ ಕೂಡಲಕುಪ್ಪೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಸಂಜೆ ಅಧಿಕಾರಿಗಳ ಜತೆ ಭೇಟಿ ನೀಡಿದ್ದರು. ‘ನಾಲೆಯ ಏರಿ ದುರಸ್ತಿಗೆ ಶೀಘ್ರ ಕ್ರಮ ವಹಿಸಬೇಕು. ಹಾನಿಯಾಗಿರುವ ರಸ್ತೆ ಮತ್ತು ಬಂಡಿಜಾಡನ್ನೂ ದುರಸ್ತಿ ಮಾಡಿಸಬೇಕು. ಬೆಳೆ ಹಾನಿಯ ಬಗ್ಗೆ ಒಂದೆರಡು ದಿನಗಳಲ್ಲಿ ವರದಿ ಸಿದ್ದಪಡಿಸಿದರೆ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.
ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಚೇತನಾ ಯಾದವ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿ. ಜಯಂತ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.