ADVERTISEMENT

ಕಾವೇರಿ ನದಿಯ ಪಾವಿತ್ರ್ಯ ಕಾಪಾಡುವ ಸಂಕಲ್ಪ ತೊಡಿ: ಸುತ್ತೂರು ಶ್ರೀ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 15:54 IST
Last Updated 29 ಸೆಪ್ಟೆಂಬರ್ 2025, 15:54 IST
<div class="paragraphs"><p>ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ‘ಕಾವೇರಿ ಆರತಿ’ ನೆರವೇರಿಸಿದರು</p></div>

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ‘ಕಾವೇರಿ ಆರತಿ’ ನೆರವೇರಿಸಿದರು

   

ಕೆಆರ್‌ಎಸ್‌ (ಮಂಡ್ಯ): ‘ಉತ್ತರ, ದಕ್ಷಿಣ ಭಾರತದ ಪರಂಪರೆಯ ಸಮ್ಮಿಲನವಾಗಿರುವ ಕಾವೇರಿ ಆರತಿಯನ್ನು ಮೊದಲ ಬಾರಿಗೆ ವಿಶೇಷವಾಗಿ, ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಕಾವೇರಿ ಆರತಿ ಎಲ್ಲರನ್ನೂ ಒಳಗೊಂಡಿದ್ದು ಪವಿತ್ರ ಭಾವನೆ ಎಲ್ಲರಲ್ಲೂ ಬಂದು ಜನರ ಮನಸಿಗೆ ಮುದ ನೀಡಲಿ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಿಸಿದರು.

ನಾಲ್ಕನೇ ದಿನವಾದ ಸೋಮವಾರ ‘ಕಾವೇರಿ ಆರತಿ’ ನೆರವೇರಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಕನಸಿನ ಯೋಜನೆಯಾದ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬರದ ನಾಡನ್ನು ಹಸಿರು ಮಾಡಿದ ಕೆಆರ್‌ಎಸ್‌ನ ಪವಿತ್ರ ಸ್ಥಳದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದರು.

ADVERTISEMENT

ಕಾವೇರಿ ಆರತಿ ಮಾಡುವಾಗ ನದಿಯನ್ನು ಅಶುಚಿಗೊಳಿಸುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. ನದಿಯ ಪಾವಿತ್ರ್ಯ ಕಾಪಾಡಬೇಕು. ಪ್ರಕೃತಿಯನ್ನು ನಾಶ ಮಾಡಬಾರದು. ಪವಿತ್ರ ಭಾವನೆ ಎಲ್ಲರಲ್ಲೂ ಇರಲಿ ಎಂದು ಹೇಳಿದರು.

ಮಂಡ್ಯ ಶಾಸಕ ರವಿಕುಮಾರ್ ಮಾತನಾಡಿ, ‘ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮೊದಲು ಅಂಕಿತ ಹಾಕಿದ್ದೇ ದಿನೇಶ್ ಗೂಳಿಗೌಡರು. ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಯಿತು ಎಂದರು.

ಕಾವೇರಿ ಆರತಿಯಿಂದ ಮೌಢ್ಯ ಬಿತ್ತುತ್ತಾರೆ ಎನ್ನುವವರು ಮನೆಯಲ್ಲಿ ಪೂಜೆ ಮಾಡುತ್ತಾರೆ. ಈ ನಾಡಿಗೆ, ಜನತೆಗೆ ಒಳ್ಳೆಯದಾಗಲಿ ಎಂದು ಕಾವೇರಿ ಆರತಿಯನ್ನು ಮಾಡುತ್ತಿದ್ದರೆ ಅದನ್ನು ಕೆಲವರು ವಿರೋಧಿಸುತ್ತಾರೆ. ತಾಯಿ ಅವರಿಗೂ ಒಳ್ಳೆಯದು ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ನಂದಿನಿ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ನಾಡಿನ ಸಂಸ್ಕೃತಿಯ ಅನಾವರಣ

ಕೆಆರ್‌ಎಸ್‌ ಬೃಂದಾವನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ‘ಕಾವೇರಿ ಆರತಿ’ ನಾಡಿನ ಸಂಸ್ಕೃತಿಯ ಅನಾವರಣದ ವೇದಿಕೆಯಾಗಿ ಮಾರ್ಪಟ್ಟಿದೆ.

ನಾಲ್ಕು ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಕಾವೇರಿ ಆರತಿಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕೆಆರ್‌ಎಸ್‌ ವಿದ್ಯುತ್ ದೀಪಾಲಂಕಾರಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

‘ಜಲಕ್ರೀಡೆ, ಸಂಗೀತ ಕಾರಂಜಿಯ ಜೊತೆಗೆ ಚಿಣ್ಣರ ಲೋಕವನ್ನೇ ಸೃಷ್ಟಿಸಿರುವ ಬೃಂದಾವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರ ಮನಸೂರೆಗೊಂಡಿವೆ. ವೀರಭದ್ರನ ಕುಣಿತ, ವೀರಗಾಸೆ ಕುಣಿತ, ಪುರವಂತಿಕೆ ಕುಣಿತ ಕಾವೇರಿ ಆರತಿಯ ಸೊಬಗನ್ನು ಹೆಚ್ಚಿಸಿವೆ’ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.