ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಮಂಡ್ಯ: ‘ಆಟೊ ಖರೀದಿಗೆ ಪಡೆದಿದ್ದ ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಮೈಕ್ರೊ ಫೈನಾನ್ಸ್ ಸಿಬ್ಬಂದಿಯು ಸಾಲ ಪಡೆದಿದ್ದ ವ್ಯಕ್ತಿಯ 7 ವರ್ಷದ ಮಗಳನ್ನೇ ಕರೆದೊಯ್ದಿದ್ದಾನೆ’ ಎಂಬ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದ ಆಟೊ ಚಾಲಕ ನವೀನ ಎಂಬುವವರು ನೀಡಿದ ದೂರಿನ ಮೇರೆಗೆ ಖಾಸಗಿ ಮೈಕ್ರೊ ಫೈನಾನ್ಸ್ ಸಂಸ್ಥೆ ವಿರುದ್ಧ ಮಳವಳ್ಳಿ ತಾಲ್ಲೂಕು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಏನಿದು ಘಟನೆ: ಜಾಲಹಳ್ಳಿ ನಿವಾಸಿ ಮಂಗಳಮ್ಮ ಎಂಬುವರು ತನ್ನ ಪುತ್ರ ನವೀನ್ ಅವರಿಗೆ ಆಟೊ ಖರೀದಿಗಾಗಿ ಬಜಾಜ್ ಮೈಕ್ರೊ ಫೈನಾನ್ಸ್ ಸಂಸ್ಥೆಯಿಂದ ₹40 ಸಾವಿರ ಸಾಲ ಕೊಡಿಸಿದ್ದರು. ₹2,200 ಕಂತನ್ನು 12 ತಿಂಗಳು ನಿಯಮಿತವಾಗಿ ಕಟ್ಟಿದ್ದರು. ಮೇ ತಿಂಗಳ 13ನೇ ಕಂತು ಕಟ್ಟಲು ತಡವಾಗಿದ್ದಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.
'ಜೂ.16ರಂದು ನಾನು, ನನ್ನ ಪತ್ನಿ ಪ್ರಮೀಳಾ ಹಾಗೂ ನನ್ನ ಮಕ್ಕಳು ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದಲ್ಲಿರುವ ಪತ್ನಿಯ ಅಕ್ಕ ಶೋಭಾ ಅವರ ಮನೆಗೆ ಹೋಗಿದ್ದೆವು. ಇದೇ ವೇಳೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಎಲ್ಲರೂ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನಮ್ಮನ್ನು ಹುಡುಕಿಕೊಂಡು ಪೂರಿಗಾಲಿ ಗ್ರಾಮಕ್ಕೆ ಬಂದಿದ್ದ ಮೈಕ್ರೊ ಫೈನಾನ್ಸ್ ಸಿಬ್ಬಂದಿಯು ನಮ್ಮ ಕುಟುಂಬದವರನ್ನು ಮಕ್ಕಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನವೀನ್ ತಿಳಿಸಿದ್ದಾರೆ.
‘ನಾವು ಮನೆಗೆ ವಾಪಸ್ ಬರುವ ವೇಳೆಗೆ ನನ್ನ ಮಗಳು ದೀಕ್ಷಾ ಹಾಗೂ ಪಕ್ಕದ ಮನೆಯ ಹುಡುಗ ಸಿದ್ದರಾಜು ಅವರನ್ನು ನನ್ನ ಪತ್ನಿ ಕೆಲಸ ಮಾಡುತ್ತಿದ್ದ ಗಂಧದ ಕಡ್ಡಿ ಫ್ಯಾಕ್ಟರಿ ಬಳಿಗೆ ಫೈನಾನ್ಸ್ ಸಿಬ್ಬಂದಿ ಕರೆದೊಯ್ದಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಬಿಡದೆ ಹಿನ್ನೆಲೆಯಲ್ಲಿ ಮೈಕ್ರೊ ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳು ಮಕ್ಕಳನ್ನು ವಾಪಸ್ ಮನೆಗೆ ಕರೆತಂದು ಬಿಟ್ಟು ಹೋಗಿದ್ದಾರೆ. ಯಾರೂ ಇಲ್ಲದ ವೇಳೆ, ನಮ್ಮ ಗಮನಕ್ಕೆ ತರದೇ ಮಕ್ಕಳನ್ನು ಹೊರಗೆ ಕರೆದೊಯ್ದದ್ದು ತಪ್ಪು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಟಿ.ನರಸೀಪುರದ ಬಜಾಜ್ ಮೈಕ್ರೋ ಫೈನಾನ್ಸ್‌ನ ಮ್ಯಾನೇಜರ್ ಮತ್ತು ಅಜಿತ್ ಎಂಬ ವ್ಯಕ್ತಿಯಿಂದ ತಮಗೆ ತುಂಬಾ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಫೈನಾನ್ಸ್ ಕಂಪನಿ ಅವರು ಯಾವುದೇ ರೀತಿ ತೊಂದರೆ ಕೊಡಬಹುದು. ಹೀಗಾಗಿ ತಮಗೆ ರಕ್ಷಣೆ ನೀಡಿ ಮೈಕ್ರೊ ಫೈನಾನ್ಸ್ ಸಂಸ್ಥೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.