ಸಿ.ಡಿ. ಗಂಗಾಧರ್
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಗರದ ಮೈಷುಗರ್ ಶಾಲೆಯ ಶಿಕ್ಷಕರ ಸಂಬಳಕ್ಕಾಗಿ ಕೊಟ್ಟ ಮಾತಿನಂತೆ ಠೇವಣಿ ಇಡಬೇಕೆಂದು ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಒತ್ತಾಯಿಸಿದ್ದಾರೆ.
ಶಾಲೆಯನ್ನು ಗುತ್ತಿಗೆಗೆ ನೀಡುವ ವಿಚಾರಕ್ಕೆ ಕೇಂದ್ರ ಸಚಿವರು ಹಾಗೂ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುತ್ತಿಗೆ ನೀಡುವ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ಇದೇ ಸಮಯದಲ್ಲಿ ಶಾಲೆಯ ಅಭಿವೃದ್ಧಿ ಮತ್ತು ಶಿಕ್ಷಕರ ಸಂಬಳಕ್ಕಾಗಿ ಸಿಎಸ್‌ಆರ್ ನಿಧಿಯಲ್ಲಿ ಹಣ ಕೊಟ್ಟು ಠೇವಣಿ ಇಡುವುದಾಗಿ ಕೇಂದ್ರ ಸಚಿವರು ಹೇಳಿದ್ದರು. ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.
ಕಾರ್ಖಾನೆ ಸಂಕಷ್ಟದಲ್ಲಿರುವ ಕಾರಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಠೇವಣಿ ಇಡದಿರುವುದರಿಂದ ಈವರೆಗೆ ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ವೇತನ ನೀಡುವಂತೆ ಶಿಕ್ಷಕರು ಮನವಿ ಮಾಡಿದ್ದಾರೆ. ಹೀಗಾಗಿ ಮೈಷುಗರ್ ಆಡಳಿತ ಮಂಡಳಿಯಿಂದಲೂ ಕೇಂದ್ರ ಸಚಿವರಿಗೆ ಪತ್ರ ಬರೆದು, ಅವರ ಆಪ್ತ ಸಹಾಯಕರೊಂದಿಗೂ ಸಮಾಲೋಚಿಸಲಾಗಿದೆ. ಆದರೆ, ಈವರೆಗೆ ಕೇಂದ್ರ ಸಚಿವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಸರ್ವ ಸದಸ್ಯರ ಸಭೆ: ಸಕ್ಕರೆ ಕಾರ್ಖಾನೆಯ ಹಿಂದಿನ ಆಡಳಿತ ಮಂಡಳಿಯಲ್ಲಿ ಆರ್ಥಿಕ ಲೋಪಗಳು ಕಂಡು ಬಂದಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಲೋಕಾಯುಕ್ತ ತನಿಖೆಗೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ನ.3ರಂದು ಮೈಷುಗರ್ ಕಂಪನಿಯ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದ್ದು, 2016-17ರ ಆಡಿಟ್ ವರದಿಯನ್ನು ಅನುಮೋದಿಸುವ ಸಂಬಂಧ ಸಭೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
20ರಂದು ಕ್ರಷಿಂಗ್ ಸ್ಥಗಿತ
ಮೈಷುಗರ್‌ನಲ್ಲಿ 2025–26 ರ ಹಂಗಾಮು ಕಬ್ಬು ಅರಿಯುವಿಕೆಯು ಈಗಾಗಲೇ ಅಂತಿಮ ಹಂತಕ್ಕೆ ತಲುಪಿದ್ದು, ಈವರೆಗೆ 1.25 ಲಕ್ಷ ಟನ್ ಕಬ್ಬು ನುರಿಸಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅ.20ರಂದು ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಹಂಗಾಮಿನಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯಲು ನಿರ್ಧರಿಸಲಾಗಿತ್ತು. ಆದರೆ, ರೈತರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಪೂರೈಕೆಯಾಗುತ್ತಿಲ್ಲ. ಒಂದೊಮ್ಮೆ ಕಬ್ಬು ಪೂರೈಕೆಯಾದರೆ ಕ್ರಷಿಂಗ್ ಸ್ಥಗಿತ ನಿರ್ಧಾರವನ್ನು ಬದಲಿಸಿ, ಕ್ರಷಿಂಗ್ ಮುಂದುವರಿಸಲಾಗುವುದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.