
ಪಾಂಡವಪುರ: 2025–26ನೇ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನಾದ್ಯಂತ 2,126 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಬಿಇಒ ಧರ್ಮಶೆಟ್ಟಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶನಿವಾರ ನಡೆದ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಅಭ್ಯಾಸ ಪರೀಕ್ಷೆಗಳನ್ನು ನಡೆಸಲಾಗಿದೆ. ಜ.5ರಿಂದ 10ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೂಡ ನಡೆಸಲಾಗುವುದು. ಮಕ್ಕಳ ಕಲಿಗೆ ಪೂರಕವಾಗಿ, ವಾರ್ಷಿಕ ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಈ ಬಾರಿ ಶೇ 100 ಫಲಿತಾಂಶ ದಾಖಲಿಸಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಶಾಲೆ ಹಾಜರಾತಿ ಇರುವ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಮನವೊಲಿಸುವ ಕಾರ್ಯವನ್ನು ಮುಖ್ಯ ಶಿಕ್ಷಕರು ಮಾಡುತ್ತಿದ್ದಾರೆ. ಜತೆಗೆ ನಿತ್ಯ ಬೆಳಿಗ್ಗೆ 8.30 ರಿಂದ ಸಂಜೆ 5.30ರವರೆಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳು ಗೈರಾಗುವುದನ್ನು ನಿಲ್ಲಿಸಿ: ಈ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ತಂದೆ ಮರಣ ಹೊಂದಿದ್ದರಿಂದ ಅವರ ಪೋಷಕರು ಆಕೆಯನ್ನು ಶಾಲೆಗೆ ಕಳುಹಿಸುವುದಿಲ್ಲ ಎನ್ನುತ್ತಿದ್ದಾರೆ ಎಂದು ಸಭೆಯಲ್ಲಿ ಪೋಷಕರೊಬ್ಬರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಸಮನ್ವಯ ಸಮಿತಿ ಸದಸ್ಯ ಎಸ್.ಅಶ್ವತ್ಥ್ ನಾರಾಯಣ್, ಯಾವುದೇ ಸಮಸ್ಯೆಯಿದ್ದರೂ ಶಾಲೆಗೆ ಹೆಣ್ಣುಮಕ್ಕಳು ಗೈರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಹಕ್ಕು ಕಸಿದುಕೊಳ್ಳಬಾರದು. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿದೆ ಬಾಲ್ಯವಿವಾಹ ಮಾಡಿದರೆ ಪೋಷಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಾಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಎನ್.ಕೃಷ್ಣೇಗೌಡ, ಮುಖ್ಯ ಶಿಕ್ಷಕ ಎನ್.ಮಹಾದೇವಪ್ಪ, ಸಹ ಶಿಕ್ಷಕರಾದ ಕರಿಮುನ್ನೀಸ್ಸಾ, ಸವಿತಾ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.