ADVERTISEMENT

ಪತಿಯನ್ನು ಕೊಂದವರನ್ನು ಬ್ಲಾಸ್ಟ್‌ ಮಾಡಿ, ಬಿಡಬೇಡಿ: ಯೋಧ ಗುರು ಪತ್ನಿ ಕಲಾವತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 10:46 IST
Last Updated 15 ಫೆಬ್ರುವರಿ 2019, 10:46 IST
ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಕಣ್ಣೀರಿಟ್ಟು ಗೋಳಾಡುತ್ತಿರುವುದು.
ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಕಣ್ಣೀರಿಟ್ಟು ಗೋಳಾಡುತ್ತಿರುವುದು.   

ಮಂಡ್ಯ: ‘ಪತಿ ಗುರು ಕೊಂದವರನ್ನು ಬ್ಲಾಸ್ಟ್ ಮಾಡಿ. ದೇಶ ಕಾಯುವವರನ್ನು ಏಕೆ ಕೊಲ್ಲುತ್ತಾರೆ? ಕೊಲೆಗಾರರನ್ನು ಬಿಡಬೇಡಿ’

–ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮ ಯೋಧ ಎಚ್‌.‌‌ಗುರು ಅವರ ಪತ್ನಿ ಕಲಾವತಿ ಅವರ ಆಕ್ರೋಶದ ನುಡಿಯಿದು.

ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರು ನೋವಿನ ನಡುವೆಯೇ ತನ್ನ ಪತಿಗಾದ ಅನ್ಯಾಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ADVERTISEMENT

ಹುತಾತ್ಮರಾದ ಯೋಧ ಮಂಡ್ಯ ಜಿಲ್ಲೆಯಮದ್ದೂರು ತಾಲ್ಲೂಕು, ಗುಡಿಗೆರೆ ಗ್ರಾಮದ ಎಚ್.ಗುರು (33) ಅವರ ಕುಟುಂಬದಲ್ಲಿ ಈಗ ಹೇಳ ತೀರದ ನೋವು, ಆಕ್ರಂಧನ. ಕುಟುಂಬಸ್ಥರು, ಬಂಧುಗಳು, ಹಿತೈಶಿಗಳು ಹಾಗೂ ಗ್ರಾಮದ ನೆರೆ ಹೊರೆಯ ದೇಶಾಭಿಮಾನಿಗಳು ಗುರು ಅವರು ಹುತಾತ್ಮರಾಗಿರುವುದಕ್ಕೆ ಕಂಬನಿ ಮಿಡಿದಿದ್ದಾರೆ.

ಅವರು ಹೊನ್ನಯ್ಯ- ಚಿಕ್ಕಹೊಳ್ಳಮ್ಮ ದಂಪತಿಯ ಹಿರಿಯ ಪುತ್ರ. ಇನ್ನಿಬ್ಬರು ಪುತ್ರರು ಇದ್ದಾರೆ. ಎಚ್.ಗುರು ಕಳೆದ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಕನಕಪುರ ತಾಲ್ಲೂಕು ಸಾಸಲಾಪುರ ಗ್ರಾಮದ ಕಲಾವತಿ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಪತ್ನಿಯನ್ನು ಸಾಸಲಾಪುರದಲ್ಲೇ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದಾರೆ.

ಗುರು ಅವರ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲದ ಕಾರಣ ಸರ್ಕಾರಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಗುಡಿಗೆರೆ ಎಳನೀರು ಮಾರುಕಟ್ಟೆ ಎದುರು ಇರುವ ಬಿಸಿಎಂ ಹಾಸ್ಟೆಲ್ ಹಿಂಭಾಗದ ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದ್ದು, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಆದರೆ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಶ್ರೀನಗರ–ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಗುರುವಾರ ಅಪರಾಹ್ನ 3.15ರ ಹೊತ್ತಿಗೆ ಉಗ್ರರು ಅತ್ಯಂತ ಘೋರ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ. ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.

* ಇವನ್ನೂ ಒದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.