ADVERTISEMENT

ರಾಜೀನಾಮೆ ಸಲ್ಲಿಸಿದ ಕೆ.ಸಿ.ನಾರಾಯಣಗೌಡ ಮನೆಗೆ ಪೊಲೀಸ್ ಭದ್ರತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 12:08 IST
Last Updated 6 ಜುಲೈ 2019, 12:08 IST
ಕೆ.ಸಿ.ನಾರಾಯಣಗೌಡರ ಮನೆಗೆ ಪೊಲೀಸ್ ಭದ್ರತೆ ನೀಡಿರುವುದು
ಕೆ.ಸಿ.ನಾರಾಯಣಗೌಡರ ಮನೆಗೆ ಪೊಲೀಸ್ ಭದ್ರತೆ ನೀಡಿರುವುದು   

ಮಂಡ್ಯ: ಕೆ.ಆರ್‌.ಪೇಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಕೆ.ಸಿ.ನಾರಾಯಣಗೌಡ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಜೆಡಿಎಸ್‌ ಕಾರ್ಯಕರ್ತರಗೆ ಆಘಾತ ತಂದಿದೆ. ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆ ಪೊಲೀಸರು ಅವರ ಮನೆಗೆ ಭದ್ರತೆ ಒದಗಿಸಿದ್ದಾರೆ.

ನಾರಾಯಣಗೌಡರು ಶುಕ್ರವಾರ ಮುಂಬೈನಿಂದ ಕೆ.ಆರ್‌.ಪೇಟೆಗೆ ಬಂದಿದ್ದರು. ಹಲವು ಕಾರ್ಯಕರ್ತರು ಅವರನ್ನು ಭೇಟಿಮಾಡಿದ್ದರು. ‘ಜೆಡಿಎಸ್‌ ತನ್ನ ಮಾತೃಪಕ್ಷ, ವರಿಷ್ಠ ಎಚ್‌.ಡಿ.ದೇವೇಗೌಡರು ತಂದೆಯ ಸಮಾನ. ಯಾವುದೇ ಕಾರಣಕ್ಕೂ ಜೆಡಿಎಸ್‌ ತ್ಯಜಿಸುವುದಿಲ್ಲ. ಜೆಡಿಎಸ್‌ನಲ್ಲೇ ರಾಜಕಾರಣ ಆರಂಭಿಸಿದ್ದೇನೆ, ಇಲ್ಲೇ ಮುಗಿಸುತ್ತೇನೆ’ ಎಂದು ಶಾಸಕರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದ ಮಾತುಗಳನ್ನು ಕಾರ್ಯಕರ್ತರು ನೆನಪು ಮಾಡಿಕೊಂಡರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಮೆರಿಕದಲ್ಲಿ ಇರುವಾಗ ಈ ರೀತಿ ಮಾಡಬಾರದಿತ್ತು ಎಂಬ ಮಾತು ಕೂಡ ಕೇಳಿ ಬಂತು. ಮುಖಂಡರಲ್ಲಿ ಒಂದು ರೀತಿಯ ಹತಾಶೆಯ ಮನೋಭಾವ ಕಂಡು ಬಂತು. ಹಲವರು ಅವರ ಬಸವೇಶ್ವರನಗರದ ಮನೆಗೆ ಭೇಟಿ ನೀಡುತ್ತಿದ್ದರು. ಇದನ್ನು ಮನಗಂಡ ಪೊಲೀಸರು ಭದ್ರತೆ ಒದಗಿಸಿದರು.

ADVERTISEMENT

‘ಶಾಸಕರು ಮೂರು ದಿನಗಳ ಮುಂಚೆಯೇ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಖಾಲಿ ಮಾಡಿದ್ದರು. ಸೋಫಾ ಸೆಟ್‌, ಕಚೇರಿಯ ವಸ್ತುಗಳನ್ನು ಲಾರಿಯೊಂದು ತುಂಬಿಕೊಂಡು ಹೋಗಿತ್ತು. ಆದರೆ ಇದು ರಾಜೀನಾಮೆಯ ಮುನ್ಸೂಚನೆ ಎಂಬುದು ಗೊತ್ತಿರಲಿಲ್ಲ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.