
ನಾಗಮಂಗಲ: ‘ಪಂಚ ಪರಿವರ್ತನೆಗಳನ್ನು ಮೈಗೂಡಿಸಿಕೊಂಡರೆ ಸದೃಢ ಭಾರತ ನಿರ್ಮಾಣವಾಗುವ ಜೊತೆ ಪ್ರತಿ ವ್ಯಕ್ತಿಯೂ ಸಹ ಸಂಸ್ಕಾರವಂತರಾಗುತ್ತಾನೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ವಿಭಾಗ ಪ್ರಚಾರಕ ಅನಂತಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಘದ ಕಾರ್ಯಕ್ಕೆ ಹಾಗೂ ಹಿಂದೂಧರ್ಮಕ್ಕೆ ಇರುವಷ್ಟು ವಿರೋಧ ಹಾಗೂ ಸವಾಲುಗಳು ಪ್ರಪಂಚದ ಬೇರಾವ ಸಂಘಟನೆ ಹಾಗೂ ಬೇರಾವ ಧರ್ಮಗಳಿಗೂ ಇಲ್ಲ. ಸಂಘ ಪ್ರಾರಂಭದ ದಿನಗಳಲ್ಲಿ ಹಿಂದೂಗಳೇ ಅಪಹಾಸ್ಯ ಮಾಡಿದರು. ಆದರೆ ಇಂದು ಜಗತ್ತಿನ ಏಕೈಕ ಬೃಹತ್ ಸಂಘಟನೆಯಾಗಿ ಹಿಂದೂಧರ್ಮದ ಹಾಗೂ ರಾಷ್ಟ್ರೀಯತೆಯ ಏಳ್ಗೆಗಾಗಿ ನಿರಂತರ ಶ್ರಮಿಸುತ್ತಿದೆ. ಪಂಚ ಪರಿವರ್ತನೆಗಳಾದ ಪರ್ಯಾವರಣ, ಸಂರಕ್ಷಣೆ, ನಾಗರಿಕ ಶಿಷ್ಟಾಚಾರ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಚಿಂತನೆ, ಕುಟುಂಬ ಪ್ರಬೋಧನ್ ಗಳನ್ನು ಪ್ರತಿಯೊಬ್ಬ ಹಿಂದೂಗಳು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಭಾರತ ಬಲಿಷ್ಠವಾಗಬೇಕಾದರೆ ಭಯೋತ್ಪಾದನೆ ನಿರ್ಮೂಲನೆಯಾಗಬೇಕು’ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಹಾದೇವ ಮಾತನಾಡಿ, ‘ನಮ್ಮ ಸಂವಿಧಾನದಲ್ಲಿ ಹಿಂದೂ ಕಾನೂನಿನಲ್ಲಿ ಅನೇಕ ಜಾಗೃತಿಯಾಗುವ ವಿಷಯಗಳಿವೆ ವಸುದೈವ ಕುಟುಂಬದ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಇವುಗಳನ್ನು ಬಳೆಸಿಕೊಳ್ಳಬೇಕಿದೆ. ಹಿಂದೂವಾಗಿ ನಾವೆಲ್ಲ ಹೆಮ್ಮೆ ಪಡಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮೊದಲು ಶೋಭಾಯಾತ್ರೆ ನಡೆಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಚೇತನ್, ತಾಲ್ಲೂಕು ವಕೀಲರ ಸಂಘದ ಹಿರಿಯ ನಿರ್ದೇಶಕ ಶಿವಲಿಂಗಯ್ಯ, ವಕೀಲರ ಸಂಘದ ಸಹ ಕಾರ್ಯದರ್ಶಿ ರಾಜೇಶ್ವರಿ, ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯ ಕೋದಂಡರಾಮು, ಶ್ರೀನಿವಾಸ್, ಆಟೊಕಾಂತಿ, ಅಶೋಕ್, ಅರ್ಜುನ್ ಲಾಲ್, ದಿವಾಕರ್, ನಂಜೇಶ, ಕಾರ್ ಯೋಗೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.