ಮಂಡ್ಯ: ಸರ್ವೀಸ್ ರಸ್ತೆ ನಿರ್ಮಿಸದೆ ಶ್ರೀರಂಗಪಟ್ಟಣ-ಕುಶಾಲನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಮಗಾರಿ ನಡೆಸುತ್ತಿದ್ದನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನವದೆಹಲಿಯ ಗೃಹ ಕಚೇರಿಯಲ್ಲಿ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಂಡ್ಯ ರೈತರ ನಿಯೋಗ ಕರೆದುಕೊಂಡು ಹೋಗಿ ಶುಕ್ರವಾರ ಮನವಿ ಸಲ್ಲಿಸಿದರು.
ಮೊದಲಿಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಹಿಂದೆ ಮನವಿ ನೀಡಲಾಗಿತ್ತು. ಆಗ ನೀಡಿದ ಭರವಸೆಯಂತೆ ಎಚ್.ಡಿ.ಕುಮಾರಸ್ವಾಮಿ ಅವರು ನಿತಿನ್ ಗಡ್ಕರಿ ಅವರ ಬಳಿ ರೈತರ ಕರೆದೊಯ್ದು ಸಮಸ್ಯೆ ವಿವರಿಸಿದರು.
2019ರಲ್ಲಿ ಶ್ರೀರಂಗಪಟ್ಟಣ-ಕುಶಾಲನಗರ ನಡುವಿನ 275ರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧೀನಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳೀಯ ರೈತರಿಗೆ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. ನೀಡಿದ ಭರವಸೆಯಂತೆ ಸರ್ವಿಸ್ ರಸ್ತೆ ನಿರ್ಮಾಣ ಮಾಡದ ಕಾರಣ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು.
ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರ, ಪಾಲಹಳ್ಳಿ, ಕೆಂಪಲಿಂಗಾಪುರ, ಕಾರೇಕುರ ಬೆಳಗೊಳ, ಮಜ್ಜಿಗೆಪುರ, ಹುಲಿಕೆರೆ ಸೇರಿದಂತೆ ಇತರೆ ಗ್ರಾಮಗಳ ರೈತರಿಗೆ ತೊಂದರೆಯಾಗಲಿದೆ ಎಂಬುದನ್ನು ಮನದಟ್ಟು ಮಾಡಿಕೊಡಲಾಯಿತು. ಜೊತೆಗೆ ಶ್ರೀರಂಗಪಟ್ಟಣ ತಾಲ್ಲೂಕು ವಿಶ್ವ ದರ್ಜೆಯ ಐತಿಹಾಸಿಕ ಪ್ರವಾಸಿ ತಾಣ ಸ್ಥಳವಾಗಿದ್ದು, ಇದರಿಂದ ಪ್ರವಾಸಿ ತಾಣದ ಮೇಲೂ ಪರಿಣಾಮ ಆಗಲಿದೆ ಎಂಬುದನ್ನು ಅಳಲು ತೋಡಿಕೊಂಡಿದ್ದರು ಎಂಬುವ ಮಾತನ್ನು ನಿತಿನ್ ಗಡ್ಕರಿ ಅವರಿಗೆ ತಿಳಿಸಲಾಯಿತು.
ಶ್ರೀರಂಗಪಟ್ಟಣದಲ್ಲಿ ರೈಲು ನಿಲಿಗಡೆಗೆ ಮನವಿ: ಮಾಜಿ ಶಾಸಕ ರವೀಂದ್ರ ಶ್ರೀಂಕಠಯ್ಯ ಅವರು, ಹಲವು ರೈಲುಗಳು ಶ್ರೀರಂಗಪಟ್ಟಣದಲ್ಲಿ ನಿಲುಗಡೆ ಆಗದ ಕಾರಣ ತೊಂದರೆ ಆಗುತ್ತಿದೆ. ಮೊದಲು ಶ್ರೀರಂಗಪಟ್ಟಣದಲ್ಲಿ ನಿಲ್ಲಿಸುತ್ತಿದ್ದ ರೈಲುಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಭರವಸೆ ನೀಡಿದ ಗಡ್ಕರಿ: ಸಚಿವ ನಿತಿನ್ ಗಡ್ಕರಿ ಅವರು ಮನವಿಗೆ ಸ್ಪಂದಿಸಿ, ನಿರ್ಮಾಣ ಮಾಡಲಾಗುತ್ತಿರುವ ಹೆದ್ದಾರಿಯ ಎರಡು ಭಾಗಗಳಲ್ಲಿ ಎತ್ತರದ ತಡೆಗೋಡೆಗಳು ನಿರ್ಮಾಣವಾಗುತ್ತಿರುವುದರಿಂದ ಸರ್ವೀಸ್ ರಸ್ತೆ ನಿರ್ಮಿಸಿಕೊಡಲು ಕಷ್ಟ ಎನಿಸುತ್ತದೆ. ಆದರೂ ರೈತರ ಮತ್ತು ಅಲ್ಲಿನ ಪ್ರವಾಸಿತಾಣ ಕ್ಷೇತ್ರವಾದ ಶ್ರೀರಂಗಪಟ್ಟಣದಲ್ಲಿ ಅನುಕೂಲವಾಗಲೆಂದು ಹೆಚ್ಚುವರಿ ಹಣ ಬಿಡುಗಡೆ ಮಾಡಿ, ಸರ್ವೀಸ್ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಪಾಲಹಳ್ಳಿ ರಾಮಕೃಷ್ಣ, ವೆಂಕಟೇಶ್, ರವಿ, ಲೊಕೇಶ್, ಪ್ರಶಾಂತ್, ಸುನಿಲ್, ಚಂದನ್ ಭಾವವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.