ADVERTISEMENT

ಶ್ರೀರಂಗಪಟ್ಟಣ ಜಂಬೂ ಸವಾರಿ: ಕಲಾತಂಡಗಳ ಮೆರುಗು

ದಸರಾಕ್ಕೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಜಂಬೂ ಸವಾರಿ’ಗೆ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌ ಇದ್ದಾರೆ  –ಪ್ರಜಾವಾಣಿ ಚಿತ್ರ 
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಜಂಬೂ ಸವಾರಿ’ಗೆ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌ ಇದ್ದಾರೆ  –ಪ್ರಜಾವಾಣಿ ಚಿತ್ರ    

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಪಟ್ಟಣದಲ್ಲಿ ಗುರುವಾರ ಆರಂಭವಾದ ನಾಲ್ಕು ದಿನಗಳ ‘ಶ್ರೀರಂಗಪಟ್ಟಣ ದಸರಾ ಉತ್ಸವ’ದ ಅಂಗವಾಗಿ ನಡೆದ ಜಂಬೂಸವಾರಿಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ಬನ್ನಿ ಮಂಟಪದ ಬಳಿ ಮಧ್ಯಾಹ್ನ 3.40ಕ್ಕೆ ‘ಜಂಬೂ ಸವಾರಿ’ಗೆ ಚಾಲನೆ ದೊರೆಯಿತು. ನಾಲ್ಕನೇ ಬಾರಿ ಅಂಬಾರಿ ಹೊತ್ತಿದ್ದ ಮಹೇಂದ್ರ ಆನೆಯ ಮೇಲೆ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ವೇದ ಘೋಷಗಳ ನಡುವೆ ಪುಷ್ಪಾರ್ಚನೆ ಮಾಡಲಾಯಿತು. 

ಕುಮ್ಕಿ ಆನೆಗಳಾಗಿ ಲಕ್ಷ್ಮಿ, ಕಾವೇರಿ ಮೆರವಣಿಗೆಯುದ್ದಕ್ಕೂ ಮಹೇಂದ್ರನ ಜೊತೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಜಂಬೂ ಸವಾರಿಯು ತಾಲ್ಲೂಕಿನ ಕಿರಂಗೂರು, ಬಾಬುರಾಯನಕೊಪ್ಪಲು, ಬೆಂಗಳೂರು– ಮೈಸೂರು ಹೆದ್ದಾರಿ, ಕುವೆಂಪು ವೃತ್ತ, ಪುರಸಭೆ ಕಚೇರಿ ವೃತ್ತ, ಮುಖ್ಯ ಬೀದಿ, ಅಂಬೇಡ್ಕರ್‌ ವೃತ್ತ ಮಾರ್ಗದಲ್ಲಿ 4 ಕಿ.ಮೀ.ದೂರ ಸಾಗಿತು.

ADVERTISEMENT

ಆಕರ್ಷಕ ಜನಪದ ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳು ಜಂಬೂ ಸವಾರಿಯ ಜತೆ ಸಾಗಿದವು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಪಟ್ಟಣ ಮತ್ತು ಆಸುಪಾಸಿನ ಗ್ರಾಮಗಳ ಸಹಸ್ರಾರು ಮಂದಿ ಅಟ್ಟಣಿಗೆಯ ಮೇಲೆ ಕುಳಿತು ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು. ಮೂರು ತಾಸುಗಳ ಕಾಲ ನಡೆದ ಜಂಬೂ ಸವಾರಿ ಮೆರವಣಿಗೆ ಸಂಜೆ 6.40ಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನ ತಲುಪಿತು. ನಂತರ ಪ್ರಧಾನ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.  ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ. ರವಿಕುಮಾರ್‌, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ ಪುಷ್ಪಾರ್ಚನೆ ಮಾಡಿದರು. ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ‘ಬನ್ನಿಪೂಜೆ’ ನೆರವೇರಿಸಿತು.

ಶ್ರೀರಂಗಪಟ್ಟಣದಲ್ಲಿ ಗುರುವಾರ ದಸರಾ ಉತ್ಸವ ಆರಂಭವಾಗಿದ್ದು ಮೊದಲ ದಿನ ನಡೆದ ಜಂಬೂಸವಾರಿಯನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.