ADVERTISEMENT

ಸುತ್ತೂರು ಮಠ ಸಕಾರಾತ್ಮಕ ಶಕ್ತಿಯ ತಾಣ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌

ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:39 IST
Last Updated 17 ಡಿಸೆಂಬರ್ 2025, 6:39 IST
<div class="paragraphs"><p>ಮಳವಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ವಿವಿಧ ಮಠಾಧೀಶರು ‘ಗ್ರೂಪ್‌ ಫೋಟೊ’ ತೆಗೆಸಿಕೊಂಡರು. </p></div>

ಮಳವಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ವಿವಿಧ ಮಠಾಧೀಶರು ‘ಗ್ರೂಪ್‌ ಫೋಟೊ’ ತೆಗೆಸಿಕೊಂಡರು.

   

ಮಂಡ್ಯ: ‘ಸುತ್ತೂರು ಮಠವು ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯ ತಾಣ ಮತ್ತು ದೇಶದ ಅತ್ಯಂತ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ. ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಮಠವು ಸಾಮಾಜಿಕ ಮತ್ತು ಧಾರ್ಮಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌ ಹೇಳಿದರು.

ಮಳವಳ್ಳಿ ಪಟ್ಟಣದಲ್ಲಿ ಬುಧವಾರ ಆರಂಭವಾದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ADVERTISEMENT

ಶಿವರಾತ್ರೀಶ್ವರ ಸ್ವಾಮಿಜಿ ಭಾರತೀಯ ಸಂತ ಪರಂಪರೆಯ ಪ್ರಕಾಶಮಾನವಾದ ಸ್ತಂಭವಾಗಿದ್ದರು. ಅವರ ಇಡೀ ಜೀವನವು ತ್ಯಾಗ, ಕರುಣೆ ಮತ್ತು ಲೋಕ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಅವರ ಆಧ್ಯಾತ್ಮಿಕ ಅಭ್ಯಾಸದ ಮೂಲ ಉದ್ದೇಶ ಮಾನವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವುದಾಗಿತ್ತು ಎಂದು ಹೇಳಿದರು. 

ಮಠದ 24ನೇ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ತಮ್ಮ ಗುರು ಪರಂಪರೆಯ ದೃಷ್ಟಿಕೋನ ಮತ್ತು ಸದ್ಭಾವನೆಯಿಂದ ಮಠದ ಶ್ರೇಷ್ಠ ಪರಂಪರೆ ಮತ್ತು ಪ್ರಯತ್ನಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಸುತ್ತೂರು ಮಠವು ದೇಶ ಮತ್ತು ವಿದೇಶಗಳಲ್ಲಿ 350ಕ್ಕೂ ಹೆಚ್ಚು ಶಿಕ್ಷಣ ಮತ್ತು ಇತರ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸುವರ್ಣಾಕ್ಷರಗಳಲ್ಲಿ ದಾಖಲು: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಇಲ್ಲಿನ ಜನರ ಭಾಗ್ಯ. ಮಳವಳ್ಳಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕಾರ್ಯಕ್ರಮ ಇದಾಗಿದೆ’ ಎಂದರು. 

ಶಿವಯೋಗಿಗಳು ಸಾವಿರಾರು ವರ್ಷಗಳ ಹಿಂದೆ ಎರಡು ರಾಜ ಮನೆತನಗಳ ನಡುವೆ ಇದ್ದಂಥ ವೈಷಮ್ಯವನ್ನು ಹೋಗಲಾಡಿಸಿ ಸಾಮರಸ್ಯದ, ಪ್ರೀತಿಯ, ಸ್ನೇಹದ ಬೀಜವನ್ನು ಬಿತ್ತಿ ನಾಡಿಗೆ ಕಲ್ಯಾಣ ತಂದವರು ಎಂದು ಹೇಳಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದಲೇ ಮಳವಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಹಾಗೂ ರಾಷ್ಟ್ರಪತಿಗಳು ಆಗಮಿಸಲು ಅವರೇ ಕಾರಣ. ನರೇಂದ್ರಸ್ವಾಮಿ ಅವರು ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಮಳವಳ್ಳಿಯ ಎಲ್ಲ ಸಂಘ ಸಂಸ್ಥೆಗಳೂ ಹಾಗೂ ಮುಖಂಡರುಗಳು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ, ಕನಕಪುರ ದೇಗುಲಮಠದ ಚನ್ನಬಸವ ಸ್ವಾಮೀಜಿ, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. 

ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಜನ 
ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು 

‘ಬಡಮಕ್ಕಳ ಶಿಕ್ಷಣಕ್ಕೆ ದಾರಿದೀಪ’

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ ‘ಸುತ್ತೂರು ಮಠ ಸಮಾಜದ ಬಡ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅನ್ನ ಅಕ್ಷರ ಆರೋಗ್ಯದ ದಾಸೋಹದ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ’ ಎಂದರು.   ‘ಸುತ್ತೂರು ಮಠಕ್ಕೂ ನಮ್ಮ ಕುಟುಂಬಕ್ಕೂ 1962ರಿಂದಲೂ ನಂಟು ಇದೆ. ಮಾಜಿ ಪ್ರಧಾನಿ ಮಂತ್ರಿ ಎಚ್.ಡಿ ದೇವೆಗೌಡ ಅವರು ರಾಜಕೀಯ ಪ್ರವೇಶ ಮಾಡಿದಾಗಿನಿಂದಲೂ ಸುತ್ತೂರು ಮಠದ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇದೆ. ನಮ್ಮ ತಂದೆ ಸುತ್ತೂರು ಮಠವನ್ನು ಎಂದಿಗೂ ಮರೆಯಬೇಡ ಎಂದು ನನಗೆ ಹೇಳುತ್ತಿದ್ದರು’ ಎಂದು ತಿಳಿಸಿದರು.

‘ನಾಡಿಗೆ ಬೆಳಕು ನೀಡಿದ ಮಳವಳ್ಳಿ’

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ವಾಗತ ಭಾಷಣದಲ್ಲಿ ಮಾತನಾಡಿ ‘1902ರಲ್ಲಿ ಶಿವನಸಮುದ್ರ ಜಲವಿದ್ಯುತ್‌ ಯೋಜನೆ ಆರಂಭವಾಯಿತು. ಇದು ಏಷ್ಯಾದ ಮೊದಲ ಜಲವಿದ್ಯುತ್‌ ಯೋಜನೆಯಾಗಿದ್ದು ನಾಡಿಗೆ ಬೆಳಕು ನೀಡಿದ ಕೀರ್ತಿ ಮಳವಳ್ಳಿಗೆ ಸಲ್ಲುತ್ತದೆ ಎಂದು ಹೇಳಿದರು.  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಳವಳ್ಳಿಗೆ ಪ್ರಥಮ ಬಾರಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಜಿಲ್ಲೆಯ ಜನರಿಗೆ ಹರ್ಷ ತಂದಿದೆ. ಮಳವಳ್ಳಿ ಅನೇಕ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು ಇಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಕಾರ್ಯಕ್ರಮ ಆಯೋಜನೆಗೆ ಜಿಲ್ಲೆಯ ಜನರ ಸಹಕಾರ ದೊಡ್ಡದು’ ಎಂದರು.