ADVERTISEMENT

ನಿಯಮ ಉಲ್ಲಂಘನೆ: ಮೈಸೂರಿನ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ ಹಾಕಲು ಆದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:38 IST
Last Updated 26 ಫೆಬ್ರುವರಿ 2026, 6:38 IST
ಡಾ.ಪಿ.ಸಿ. ಕುಮಾರಸ್ವಾಮಿ
ಡಾ.ಪಿ.ಸಿ. ಕುಮಾರಸ್ವಾಮಿ   

ಮೈಸೂರು: ‘ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಹಾಗೂ 2026ರ ಜನವರಿ ಅಂತ್ಯದವರೆಗೆ ಒಟ್ಟು 37 ಕ್ಲಿನಿಕ್‌ಗಳಿಗೆ ದಂಡ ವಿಧಿಸಲಾಗಿದೆ. 16 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 8 ಮಂದಿ ನಕಲಿ ವೈದ್ಯರನ್ನು ಪತ್ತೆ ಹೆಚ್ಚಿ ಕ್ರಮ ವಹಿಸಲಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ‍ಪ್ರಾಧಿಕಾರದಿಂದ, ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ 7 ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಅರ್ಹ ವಿದ್ಯಾರ್ಹತೆ ಇಲ್ಲದೆ ಹಾಗೂ ಅಧಿಕೃತ ನೋಂದಣಿ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ವಿಶೇಷ ಪಡೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲೋಪತಿ ಹಾಗೂ ಆಯುರ್ವೇದ ವೈದ್ಯರು ಕರ್ನಾಟಕ ಖಾಸಗಿ ವೈದ್ಯಕೀಯ ಪ್ರಾಧಿಕಾರ ಕಾಯ್ದೆ–2007ರ ಅಡಿ ಕಡ್ಡಾಯವಾಗಿ ಖಾಸಗಿ ಕ್ಲಿನಿಕ್‌ಗಳು ನೋಂದಣಿ ಮಾಡಿಕೊಳ್ಳುವಂತೆ ನಿಗಾ ವಹಿಸಲಾಗಿದೆ. ವೈದ್ಯರ ಸಂಪೂರ್ಣ ವಿವರವನ್ನು ಕ್ಲಿನಿಕ್‌ಗಳಲ್ಲಿ, ಸಾರ್ವಜನಿಕರ ಗಮನಕ್ಕೆ ಬರುವಂತೆ ನಾಮಫಲಕ ಹಾಕುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಸ್ಥಳೀಯ ಮಟ್ಟದಲ್ಲಿ ವೈದ್ಯಾಧಿಕಾರಿಗಳು ಹಾಗೂ ಎನ್‌ಜಿಒ ಒಳಗೊಂಡಂತೆ ಕಾರ್ಯಪಡೆ ಸಮಿತಿಗಳನ್ನು ರಚಿಸಲಾಗಿದೆ. ಇವು ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ನಿಗಾ ವಹಿಸಲಿದೆ. ನಕಲಿ ವೈದ್ಯರ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಕೆಪಿಎಂಎಇ ಅಡಿ 1,712 ಸಂಸ್ಥೆಗಳು ನೋಂದಣಿಯಾಗಿದ್ದು, 95 ಪ್ರಕರಣ ದಾಖಲಾಗಿದೆ. 37 ಪ್ರಕರಣಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಮತ್ತು ದಂಡ ವಿಧಿಸಲಾಗಿದೆ. 50 ಪ್ರಕರಣಗಳನ್ನು ತೀರ್ಮಾನಿಸಿ ಮುಕ್ತಾಯಗೊಳಿಸಲಾಗಿದೆ. ಹತ್ತನ್ನು ಕೆಎಂಸಿಗೆ ವರ್ಗಾವಣೆ ಮಾಡಲಾಗಿದೆ. 4 ಕ್ಲಿನಿಕ್‌ಗಳನ್ನು ಜಪ್ತಿ ಮಾಡಲಾಗಿದೆ. 2 ಮೇಲ್ಮನವಿ ಪ್ರಕರಣಗಳಿವೆ’ ಎಂದು ತಿಳಿಸಿದ್ದಾರೆ.

‘ಚರ್ಮರೋಗ ನಕಲಿ ವೈದ್ಯರ ಹಾಗೂ ನಾಟಿ ವೈದ್ಯರ/ ಸಾಂಪ್ರದಾಯಿಕ ಚಿಕಿತ್ಸೆ ವಿಧಾನದ ಹಾವಳಿ ತಡೆಗಟ್ಟಲು 14 ಕ್ಲಿನಿಕ್‌ಗಳನ್ನು ನಕಲಿ ವೈದ್ಯರವು ಎಂಬ ಸಂಶಯದಿಂದ ಪರಿಶೀಲಿಸಲಾಗಿದೆ. ಇವುಗಳ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಚಾರಣೆ ಮಾಡಲಾಗಿದೆ. ನೋಂದಾಯಿತವಲ್ಲದ ಕ್ಲಿನಿಕ್‌ಗಳ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಿ, ₹ 25ಸಾವಿರದವರೆಗೂ ದಂಡ ವಿಧಿಸಲಾಗಿದೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.