ADVERTISEMENT

ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ಚಲನಚಿತ್ರೋತ್ಸವದಲ್ಲಿ ಅಂಬೇಡ್ಕರ್ ಜೀವನ ಅನುರಣನ, ಜನಪದ ಉತ್ಸವದಲ್ಲಿ ‘ಭೀಮಯಾನ’

ಮೋಹನ್‌ ಕುಮಾರ್‌ ಸಿ.
Published 12 ಜನವರಿ 2026, 5:35 IST
Last Updated 12 ಜನವರಿ 2026, 5:35 IST
<div class="paragraphs"><p>ಮೈಸೂರಿನ ರಂಗಾಯಣದಲ್ಲಿ&nbsp;‘ಬಹುರೂಪಿ’ ಬೆಳ್ಳಿ ಹಬ್ಬದ ಪ್ರಯುಕ್ತ ‘ಬಹುರೂಪಿ ಬಾಬಾಸಾಹೇಬ್‌– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನುವಾರ&nbsp;ಬಹುರೂಪಿ ಚಲನಚಿತ್ರೋತ್ಸವವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.  </p></div>

ಮೈಸೂರಿನ ರಂಗಾಯಣದಲ್ಲಿ ‘ಬಹುರೂಪಿ’ ಬೆಳ್ಳಿ ಹಬ್ಬದ ಪ್ರಯುಕ್ತ ‘ಬಹುರೂಪಿ ಬಾಬಾಸಾಹೇಬ್‌– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನುವಾರ ಬಹುರೂಪಿ ಚಲನಚಿತ್ರೋತ್ಸವವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.

   

ಪ್ರಜಾವಾಣಿ ಚಿತ್ರ    

ಮೈಸೂರು: ಬೆಳಗುತ್ತಿರುವ ದೀಪ ಹಿಡಿದು, ಹಾಡುವ ಪಾತ್ರೆಯೊಂದಿಗೆ (ಸಿಂಗಿಂಗ್‌ ಬೌಲ್) ಬಂದ ಬೌದ್ಧ ಬಿಕ್ಕುಗಳು ‘ಭೀಮಯಾನ’ ಮಹತ್ವವನ್ನು ಅಲ್ಲಿ ಸೇರಿದ್ದ ಸಹೃದಯರಿಗೆ ತಮ್ಮ ನಡಿಗೆಯಲ್ಲಿಯೇ ತೋರಿಕೊಟ್ಟರು. ಮುಂಬೈನ ಲೋಕಲ್ ಟ್ರೇನ್‌ಗಳಲ್ಲಿ ಪುಸ್ತಕಗಳನ್ನು ಮಾರುವ ‘ಭಟ್ಟಿ’ ಎಂಬ ಹುಡುಗ ‘ಭೂಮಿಗೀತ’ದ ಪರದೆಯಲ್ಲಿ ಕಾಣಿಸಿಕೊಂಡು ‘ಯಾರೊಬ್ಬರ ಬದುಕನ್ನು ಅಣಕಿಸಬೇಡಿ’ ಎಂದು ಗುಲ್ಜಾರ್‌ ಕವಿತೆ ವಾಚಿಸಿ, ಪ್ರತಿ ಭಾರತೀಯನ ಬದುಕೂ ದೊಡ್ಡದೇ ಎಂದು ಸಾರಿದ. 

ADVERTISEMENT

ರಂಗಾಯಣದಲ್ಲಿ ‘ಬಹುರೂಪಿ’ ಬೆಳ್ಳಿ ಹಬ್ಬದ ಪ್ರಯುಕ್ತ ‘ಬಹುರೂಪಿ ಬಾಬಾಸಾಹೇಬ್‌– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನುವಾರ ‘ಜನಪದ ಉತ್ಸವ’ ಮತ್ತು ‘ಚಲನಚಿತ್ರೋತ್ಸವ’ ಆರಂಭಗೊಂಡಿದ್ದು ಹೀಗೆ..

ರಂಗಭೂಮಿ, ಸಿನಿಮಾದಲ್ಲಿ ಪ್ರಜಾಸತ್ತೆ: ಚಲನಚಿತ್ರೋತ್ಸವ ಉದ್ಘಾಟಿಸಿದ ಲೇಖಕ ಬರಗೂರು ರಾಮಚಂದ್ರಪ್ಪ, ‘ರಂಗಭೂಮಿ, ಸಿನಿಮಾ ಏಕವ್ಯಕ್ತಿ ಕಲೆಯಲ್ಲ. ಸಮೂಹ ಕಲೆಯಲ್ಲಿ ಸರ್ವಾಧಿಕಾರಕ್ಕೆ ಅವಕಾಶವಿಲ್ಲ. ಎಲ್ಲರೂ ಸೇರಿ‌ ಕಟ್ಟುವ ಈ ಕಲಾ ಮಾಧ್ಯಮಗಳಲ್ಲಿ ಪ್ರಜಾಸತ್ತಾತ್ಮಕತೆ ಇದೆ’ ಎಂದು ಲೇಖಕ ಬರಗೂರು ರಾಮಚಂದ್ರಪ್ಪ ಹೇಳಿದರು.

‘ದೇಶದಲ್ಲಿ ಒಕ್ಕೂಟ ಸರ್ಕಾರದ ಪದ್ಧತಿಯಂತೆಯೇ ಸಿನಿಮಾ, ರಂಗಭೂಮಿ ಎಂಬುದು ಎಲ್ಲರನ್ನೂ ಒಳಗೊಳ್ಳುತ್ತದೆ. ಬೇರೆ ಬೇರೆ ಕಲಾ ಪ್ರಕಾರಗಳನ್ನೂ ಇದಕ್ಕೆ ಸೇರಿಸಬಹುದು. ನಿರ್ದೇಶಕ ಇಲ್ಲಿ ಕ್ಯಾಪ್ಟನ್‌ ಆದರೂ, ಒಬ್ಬನೇ ವಿಜೃಂಭಿಸಲಾಗದು. ಸಂಕಲನಕಾರ, ವಸ್ತ್ರವಿನ್ಯಾಸಕ, ಸಂಗೀತ ನಿರ್ದೇಶಕ ಎಲ್ಲರೂ ಬೇಕು. ಸಂವಿಧಾನದ ಒಕ್ಕೂಟ ವ್ಯವಸ್ಥೆಯೂ ಹೀಗೆ. ಶ್ರಮಜೀವಿಗಳಿಲ್ಲದೆ ಸಿನಿಮಾ ಮಾಡಲಾಗದು’ ಎಂದರು.

ಉತ್ಸವದ ಸಂಯೋಜಕ ಕೆ.ಮನು, ‘ಪ್ರತಿ ವರ್ಷವೂ ಆಶಯವನ್ನು ಧ್ವನಿಸುವ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಪ್ರಕಾರ ಮುಖ್ಯವಲ್ಲ. ವಿಷಯಕ್ಕೆ ಮಹತ್ವ ನೀಡಲಾಗುತ್ತದೆ. ಸಿನಿಮಾಗಳ ಜೊತೆಗೆ ಸಾಕ್ಷ್ಯಚಿತ್ರ ಪ್ರದರ್ಶನ ಆಗುತ್ತಿದೆ’ ಎಂದು ಹೇಳಿದರು. 

‘ಅಂಬೇಡ್ಕರ್‌, ಗಾಂಧಿ ಸೇರಿದಂತೆ ಮಹನೀಯರ ಚಿಂತನೆಗಳು ಪುಸ್ತಕಗಳಿಂದ ದೊರೆಯುವ ಮುನ್ನವೇ ವ್ಯಕ್ತಿಗೆ ಆಲೋಚನಾ ಪ್ರಜ್ಞೆಯನ್ನು ಸಿನಿಮಾಗಳು ನೀಡುತ್ತವೆ’ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಕೆ.ವಿ.ನಾಗರಾಜಮೂರ್ತಿ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ರಂಗ ಸಮಾಜದ ಸದಸ್ಯರಾದ ಸುರೇಶ್ ಬಾಬು, ಎಂ.ಎಸ್.ಜಹಾಂಗೀರ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಉತ್ಸವದ ಸಂಚಾಲಕಿ ಬಿ.ಎನ್.ಶಶಿಕಲಾ ಪಾಲ್ಗೊಂಡಿದ್ದರು. 

ಜನಪದ ಉತ್ಸವದಲ್ಲಿ ಬೌದ್ಧ ಬಿಕ್ಕುಗಳ ವೇಷಧಾರಿ ಕಲಾವಿದರು ಜನರ ನಡುವಿಂದ ಬಂದ ಕ್ಷಣ 
ವನರಂಗದ ಬಳಿಯ ಅಂಬೇಡ್ಕರ್ ಶಿಲಾಸ್ಮಾರಕವನ್ನು ಬಾಲಕನೊಬ್ಬ ಕುತೂಹಲದಿಂದ ವೀಕ್ಷಿಸಿದನು 

ಮೊದಲ ದಿನದ ರಸಾನುಭವ..! 

ಉತ್ಸವದ ಆಶಯವನ್ನು ಉಸಿರಾಡುವಂತೆ ಕಲಾವಿದರು ಬಣ್ಣಗಳಲ್ಲಿ ಬಹುಜನರ ಭಾರತವನ್ನು ಅಲ್ಲಿ ಕಟ್ಟುತ್ತಿದ್ದರು. ಶಿಲೆಗಳಲ್ಲಿ ಹೋರಾಟದ ಬದುಕನ್ನು ಕಡೆದರು. ಅಲ್ಲಿ ಹೊಮ್ಮಿದ ಅಂಬೇಡ್ಕರ್‌ ಅವರ ನುಡಿ ಬೆಳಕು ಅಂಗಳದ ಹೆಜ್ಜೆ ಹೆಜ್ಜೆಗೂ ದಾರಿಯನ್ನು ತೋರುತ್ತಿತ್ತು.  ‘ಸಾಮಾಜಿಕ ನ್ಯಾಯ ಸಾಧ್ಯವಾಗದ ಹೊರತು ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ’ ‘ಪ್ರಾಮಾಣಿಕತೆ ಎಲ್ಲ ನೈತಿಕ ಗುಣಗಳ ಸಾರ’ ಮೊದಲಾದ ಸಾಲುಗಳನ್ನು ಓದುತ್ತಾ ರಂಗದಂಗಳ ಪ್ರವೇಶ ಮಾಡಿದವರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ಮಲಯಾಳಂ’ನ ‘ಡಾ.ಬಾಬಾ ಸಾಹೇಬ್‌ ಸಾಹೇಬ್’ ಚಿತ್ರವನ್ನು ವೀಕ್ಷಿಸಿದರು. ಸಂಜೆ ಪುಸ್ತಕ ಕರಕುಶಲ ಆಹಾರ ಮೇಳದ ‘ರಸಸ್ವಾದ’ ಸವಿದರು. ಇದಿಷ್ಟು ಪ್ರೇಕ್ಷಕರು ಉತ್ಸವದ ಮೊದಲ ದಿನ ಪಡೆದ ರಸಾನುಭವ! 

ಜನವಾಣಿ ಬೇರು ಕವಿವಾಣಿ ಹೂ.. 

ಕಿಂದರಿಜೋಗಿ ಆವರಣದಲ್ಲಿ ಭಾನುವಾರ ರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್ ಜನಪದ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ‘ರಂಗಭೂಮಿಯಲ್ಲಿ ಸಾಮಾಜಿಕ ಬದ್ಧತೆಯನ್ನು ತರಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರ ಆಶಯದಲ್ಲಿ ಬಹುರೂಪಿ ರೂಪಿಸುವ ಮೂಲಕ ತೋರಿಸಲಾಗಿದೆ. ಜನವಾಣಿ ಬೇರು ಕವಿವಾಣಿ ಹೂ ಎನ್ನುವಂತೆ ಜನಪದ ಎಲ್ಲ ಕಲೆಗಳ ತಾಯಿಬೇರು’ ಎಂದರು.  ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್ ‘ಬಡವರು ತುಳಿತಕ್ಕೆ ಒಳಗಾದವರು ಅವಕಾಶ ವಂಚಿತರಾಗಿರುವವರಿಗೆ ಹೆಚ್ಚಿನ ಸೌಲಭ್ಯ ನೀಡಿ ಅವರನ್ನು ಮುಖ್ಯಭೂಮಿಕೆಗೆ ತರುವುದೇ ಅಂಬೇಡ್ಕರ್ ಅವರ ಆಶಯ’ ಎಂದು ಹೇಳಿದರು. ಮೇಘನಾ ಕುಂದಾಪುರ ಅಕ್ಷತಾ ಕುಮಟ ಲೋಕೇಶ್‌ ಮತ್ತು ತಂಡದವರು ಹಾಡಿದರು.  ರಂಗಕರ್ಮಿಗಳಾದ ಗೀತಾ ಸಿದ್ದಿ ಶಶಿಧರ್ ಭಾರಿಘಾಟ್‌ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಸಂಚಾಲಕಿ ಗೀತಾ ಮೋಂಟಡ್ಕ ಪಾಲ್ಗೊಂಡಿದ್ದರು. 

ಸಿನಿಮಾ ಪ್ರತಿರೋಧದ ಅಭಿವ್ಯಕ್ತಿ. ಕಲಾತ್ಮಕತೆ ಬಿಟ್ಟುಕೊಡದೇ ಎಲ್ಲ ವರ್ಗದ ಜನರನ್ನು ಚಿತ್ರಮಂದಿರಗಳಿಗೆ ತರುವ ಕೆಲಸವನ್ನು ಚಿತ್ರಮಾಧ್ಯಮದವರು ಮಾಡಬೇಕು
–ಬರಗೂರು ರಾಮಚಂದ್ರಪ್ಪ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.