ADVERTISEMENT

ಬಸವ ತತ್ವ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 9:26 IST
Last Updated 25 ಮೇ 2025, 9:26 IST
<div class="paragraphs"><p>ಬಸವ ಜಯಂತಿ ಕಾರ್ಯಕ್ರಮ</p></div>

ಬಸವ ಜಯಂತಿ ಕಾರ್ಯಕ್ರಮ

   

ನಂಜನಗೂಡು (ಮೈಸೂರು ಜಿಲ್ಲೆ): ವಿಶ್ವಗುರು ಬಸವಣ್ಣನವರ ತತ್ವಗಳನ್ನು ಬದುಕಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ ಎಂದು ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು.

ಇಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನೀಡುವವರಿದ್ದರೇ ಹೊರತು ಬೇಡವವರಿರಲಿಲ್ಲ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ದುಡಿಮೆಯ ಹಿರಿಮೆಯನ್ನು ಸಾರಿದ್ದರು. ದುಡಿಮೆಗೆ ಬೆಲೆ ನೀಡಿದರೆ ಬಡತನ ನಿರ್ಮೂಲನೆ ಶತಃಸಿದ್ಧ ಎಂದರು.

ಮಹಾಪುರುಷರು ಜಾತಿಗೆ ಸಮೀತರಲ್ಲ: ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಮಹಾಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಅವರು ಇಡೀ ಮಾನವಕುಲಕ್ಕೇ ಮಾದರಿಯಾಗಿದ್ದಾರೆ. ಇಂತಹ ಮಹಾಪುರಷರ ಜಯಂತಿ ಆಚರಿಸುವ ಮೂಲಕ ನಾವು ಅವರ ಆದರ್ಶ ಅಳವಡಿಸಿಕೊಂಡರೆ ಈ ಆಚರಣೆಗೆ ಅರ್ಥ ಬರುತ್ತದೆ ಎಂದರು.

12ನೇ ಶತಮಾನದಲ್ಲಿ ಮೌಢ್ಯ ಅಸ್ಪೃಶ್ಯತೆ, ಅಸಮಾನತೆ ತುಂಬಿದ್ದ ಸಮಾಜದಲ್ಲಿ ಶ್ರೇಣೀಕೃತ ಪದ್ಧತಿಯನ್ನು ನಿರ್ಮೂಲನೆ ಮಾಡಿ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು. ಇದಕ್ಕೆ ಬಸವ ಕಲ್ಯಾಣ ಕಾರ್ಯಕ್ಷೇತ್ರವಾಗಿತ್ತು. ಇಂತಹ ಪವಿತ್ರ ಕ್ಷೇತ್ರವಿರುವ ಬೀದರ್ ಜಿಲ್ಲೆಯ ತಾವೆಂಬ ಹೆಮ್ಮೆ ಇದೆ ಎಂದರು.

ಇಡೀ ಜಗತ್ತಿಗೆ ಮಾದರಿಯಾಗಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿ, ಸರ್ವರಿಗೂ ಲೇಸನ್ನು ಬಯಸಿದ ಯಾವುದಾದರೂ ಸಮಾಜವಿದ್ದರೆ ಅದು ವೀರಶೈವ ಲಿಂಗಾಯತ ಸಮಾಜ ಎಂದು ಈಶ್ವರ ಖಂಡ್ರೆ ಹೇಳಿದರು.

ನಾನು 2016-17ರಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಲು ಮನವಿ ಮಾಡಿದಾಗ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅನುದಾನ ಬಿಡುಗಡೆ ಮಾಡಿದರು, ನಂತರ ಬಿ.ಎಸ್. ಯಡಿಯೂರಪ್ಪನವರೂ ಅದಕ್ಕೆ ಅನುದಾನ ನೀಡಿದರು. ಈಗ ನಾನೇ ಉಸ್ತುವಾರಿ ಸಚಿವರಾಗಿ 770 ಅಮರಗಣಂಗಳ ಆದರ್ಶ, ಅವರ ವಚನಗಳನ್ನು ಸಾರುವಂತಹ ಅದ್ಭುತ ಆಧುನಿಕ ಅನುಭವ ಮಂಟಪ ಸಾಕಾರಗೊಳಿಸುತ್ತಿದ್ದು, ಮುಂದಿನ ವರ್ಷ ಲೋಕಾರ್ಪಣೆ ಆಗಲಿದೆ. ಇದು ವಿಶ್ವಕುಟುಂಬತ್ವದ ಸಂಕೇತವಾಗಿದೆ ಎಂದರು.

ನೈತಿಕ ಶಿಕ್ಷಣ ಅಗತ್ಯ: ಇಂದು ಬಹುತೇಕ ಯುವಕರು ಸಾಮಾಜಿಕ ತಾಣದಲ್ಲಿ ಕಳೆದು ಹೋಗುತ್ತಿದ್ದಾರೆ. ಮಾದಕ ದ್ರವ್ಯದ ದಾಸರಾಗುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅಗತ್ಯವಿದೆ. ಮಕ್ಕಳಿಗೆ ಏಕಾಗ್ರತೆ ಅಂತರ್ಗತವಾಗಬೇಕಿದೆ. ಹೀಗಾಗಿಯೇ ಅನುಭವ ಮಂಟಪದಲ್ಲಿ ಇಷ್ಟಲಿಂಗಪೂಜೆಯನ್ನು ವೈಜ್ಞಾನಿಕವಾಗಿ ಮಾಡುವ ಪರಿಕಲ್ಪನೆಯನ್ನು ನೀಡಲಾಗುತ್ತಿದೆ. ಇದು ಮಕ್ಕಳಲ್ಲಿ ಏಕಾಗ್ರತೆ ತರಲಿದ್ದು, ಇದರಿಂದ ಸಮಾಜಕ್ಕೆ, ದೇಶದ ಅಭಿವೃದ್ಧಿಗೆ ಯುವ ಸಂಪನ್ಮೂಲದ ದಿವ್ಯ ಕೊಡುಗೆ ದೊರೆಯಲಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತರಲ್ಲಿ ಏಕತೆಯನ್ನು ಮೂಡಿಸಿ, ಎಲ್ಲ ಒಳ ಪಂಗಡಗಳನ್ನೂ ಒಗ್ಗೂಡಿಸುವ ಅಗತ್ಯವಿದೆ. ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ದ ಸಮಾಜ ನಮ್ಮದು, ಅನ್ನ, ಅಕ್ಷರ, ಆಶ್ರಯ ನೀಡುತ್ತಿರುವ ನಮ್ಮ ಮಠಮಾನ್ಯಗಳು ಮೇರುಪಂಕ್ತಿಯಲ್ಲಿ ನಿಲ್ಲುತ್ತವೆ ಎಂದು ಹೇಳಿದರು.

ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ನಿರ್ಮಾಣ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಿಲಯಗಳನ್ನು ನಿರ್ಮಿಸುವ ಕಾರ್ಯವನ್ನು ವೀರಶೈವ ಲಿಂಗಾಯತ ಮಹಾಸಭಾ ಮಾಡುತ್ತಿದೆ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ: ಈ ಭಾಗದಲ್ಲಿ ಮಾನವ- ಆನೆ ಮತ್ತು ಮಾನವ-ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಿದ್ದು, ಆನೆಗಳು ನಾಡಿಗೆ ಬಾರದಂತೆ ತಡೆಯಲು 8 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಿಲು ಹೆಚ್ಚುವರಿಯಾಗಿ ₹ 12 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಚೈನ್ ಲಿಂಕ್ ಫೆನ್ಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸುತ್ತೂರು‌ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಎಚ್.ಎಂ. ಗಣೇಶ್ ಪ್ರಸಾದ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.