ADVERTISEMENT

ಪಿರಿಯಾಪಟ್ಟಣ | ಚರ್ಚ್ ದಾಳಿ ಪ್ರಕರಣ: ಅಳವಡಿಸದ ಕ್ಯಾಮೆರಾ, ಪ್ರಗತಿ ಕಾಣದ ತನಿಖೆ

ಬಿ.ಆರ್.ಗಣೇಶ್
Published 29 ಡಿಸೆಂಬರ್ 2022, 19:30 IST
Last Updated 29 ಡಿಸೆಂಬರ್ 2022, 19:30 IST
ಚರ್ಚಿನ ಮುಂಭಾಗ ಇರುವ ಯೇಸುವಿನ ಪ್ರತಿಮೆ ಬಳಿಯಿರಿಸಿದ್ದ ಗೋಲಕವನ್ನು ಒಡೆದು ಹಾಕಿರುವ ದುಷ್ಕರ್ಮಿಗಳು
ಚರ್ಚಿನ ಮುಂಭಾಗ ಇರುವ ಯೇಸುವಿನ ಪ್ರತಿಮೆ ಬಳಿಯಿರಿಸಿದ್ದ ಗೋಲಕವನ್ನು ಒಡೆದು ಹಾಕಿರುವ ದುಷ್ಕರ್ಮಿಗಳು   

ಪಿರಿಯಾಪಟ್ಟಣ: ಪಟ್ಟಣದ ಸೇಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಚರ್ಚ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು ಸುಳಿವು ಪಡೆಯಲು ತೊಡಕಾಗಿ ಪರಿಣಮಿಸಿದೆ.

‘40 ವರ್ಷ ಹಿಂದೆ ನಿರ್ಮಿಸಿರುವ ಚರ್ಚ್‌ ಒಳ ಮತ್ತು ಹೊರ ಆವರಣಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಚರ್ಚ್‌ನ ಆಡಳಿತ ಮಂಡಳಿಯನಿರ್ಲಕ್ಷ ದುಷ್ಕರ್ಮಿಗಳ ಪತ್ತೆ ಸವಾಲಿನ ಕೆಲಸವೆನಿಸಿದೆ’ ಎಂದು ಪೊಲೀಸ್ ಬಾತ್ಮಿದಾರರೊಬ್ಬರು ತಿಳಿಸಿದರು.

’ದಾಳಿ ಹಿಂದೆ 2 ರಿಂದ 3 ಮಂದಿ ಭಾಗಿಯಾಗಿರಬಹುದು’ ಎಂದುಚರ್ಚ್‌ನ ಪಾಲನಾ ಸಮಿತಿ ಅಧ್ಯಕ್ಷ ಜಾನ್ಸನ್ ಫರ್ನಾಂಡಿಸ್ ಅನುಮಾನ ವ್ಯಕ್ತಪಡಿಸಿದ್ದರು. ಹಣಕಾಸಿನ ಕೊರತೆಯಿಂದ ಕ್ಯಾಮೆರಾ ಅಳವಡಿಸುವ ಕಾರ್ಯವೂ ಮುಂದೂಡಿಕೆಯಾಗಿತ್ತು ಎಂದು ತಿಳಿಸಿದ್ದರು.

ADVERTISEMENT

ಹಲವು ಅನುಮಾನ:ಚರ್ಚ್‌ ಪ್ರವೇಶಕ್ಕೆ ಒಟ್ಟು ನಾಲ್ಕು ಬಾಗಿಲುಗಳಿದ್ದು ಬಲಭಾಗದ ಬಾಗಿಲಿನ ಬೀಗವನ್ನು ಕಟ್ಟಡ ನಿರ್ಮಾಣಕ್ಕೆ ಇರಿಸಿದ್ದ ದೊಡ್ಡ ಗಾತ್ರದ ಮಣ್ಣಿನ ಇಟ್ಟಿಗೆಯಿಂದ ಒಡೆದು ಒಳ ನುಗ್ಗಿರುವ ದುಷ್ಕರ್ಮಿಗಳು ಅಲ್ಲಿದ್ದ ಬಾಲ ಏಸು ಪ್ರತಿಮೆ ಮತ್ತು ತೊಟ್ಟಿಲು, ಹೂವಿನ ಅಲಂಕಾರವನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲಿಯೇ ಸಿಕ್ಕ ಕತ್ತರಿ ಜೊತೆಗೆ ಹೊರ ಬಂದು ಚರ್ಚ್ ಹೊರಭಾಗದಲ್ಲಿ ಇರುವ ಪ್ರತಿಮೆ ಬಳಿ ಗೋಡೆಗೆ ಅಳವಡಿಸಿದ್ದ ಗೋಲಕದ ಬೀಗವನ್ನು ಹೊಸ ಚರ್ಚ್ ನಿರ್ಮಾಣಕ್ಕೆ ಎಂದು ಬಳಸಿದ ಕಬ್ಬಿಣ, ಕತ್ತರಿಬಳಸಿ ಒಡೆದು ಹಣ ದೋಚಿದ್ದಾರೆ.

ಕ್ರಿಸ್‌ಮಸ್‌ಗೆ ಗೋದಲಿ ಬಳಿಯಿಟ್ಟಿದ್ದ ಗೋಲಕ ಹೊತ್ತೊಯ್ದಿದ್ದು, ಹಿಂಭಾಗದ ಕಟ್ಟಡದ ಬಳಿ ಹಣ ಎಸೆದಿದ್ದಾರೆ. ಹಗಲಿನ ವೇಳೆ ರಸ್ತೆ ಬದಿಯಲ್ಲಿರುವ ಗೋಲಕವನ್ನು ಒಡೆಯುವ ಕೆಲಸವನ್ನು ವೃತ್ತಿಪರ ಕಳ್ಳರು ಮಾಡುವ ಸಾಧ್ಯತೆ ಇಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.

ದುಷ್ಕರ್ಮಿಗಳು ಗ್ಲೌಸ್‌ ಬಳಸಿ ಕೃತ್ಯ ನಡೆಸಿದ್ದು,ಶ್ವಾನ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದುವರೆಗೂ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.

‘ಗೋಲಕ ಒಡೆದು ಹಣ ದೋಚಿರುವುದು ಬೇಸರದ ಸಂಗತಿಯಲ್ಲ. ಆದರೆ, ಬಾಲ ಯೇಸು ಪ್ರತಿಮೆ ಧ್ವಂಸಗೊಳಿಸಿ ಚರ್ಚ್‌ನ ಒಳಭಾಗದಲ್ಲಿ ದಾಂದಲೆ ನಡೆಸಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ. ದುಷ್ಕರ್ಮಿಗಳನ್ನು ಕೂಡಲೇ ಪತ್ತೆಮಾಡಬೇಕು’ ಎಂದು ಚರ್ಚ್‌ನ ಪ್ರಾರ್ಥನೆಯಲ್ಲಿ ಭಾಗವಹಿಸುವ ಅಣ್ಣಮ್ಮ ಮತ್ತು ಕಿರಣ್ ಬೇಸರ ವ್ಯಕ್ತಪಡಿಸಿದರು.

*
ತನಿಖೆ ಪ್ರಗತಿ ಕಾಣಲು ಸುಳಿವುಗಳನ್ನು ಹುಡುಕುತ್ತಿದ್ದು ಸೂಕ್ತ ಸುಳಿವು ಸಿಕ್ಕಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹೆಚ್ಚಲು ನೆರವಾಗಲಿದೆ.
-ಶ್ರೀಧರ್,ಇನ್ಸ್‌ಪೆಕ್ಟರ್, ಪಿರಿಯಾಪಟ್ಟಣ ಠಾಣೆ

*
ಧಾರ್ಮಿಕ ಅಲ್ಪಸಂಖ್ಯಾತರ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದು ಖಂಡನೀಯ. ಕೂಡಲೇ, ಅವರನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡಬೇಕು ಇಲ್ಲದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ.
-ಸಿ.ಎಸ್.ಜಗದೀಶ್,ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.