ಮೈಸೂರು: ರಾಜ್ಯದಲ್ಲಿ ‘ಬಾಲಭಿಕ್ಷಾಟನೆ’ಯಲ್ಲಿ ತೊಡಗುವ ಮಕ್ಕಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬರೆಯುವ ಕೈಗಳಿಗೆ ‘ಬರೆ’ ಬೀಳುತ್ತಿದೆ.
ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಮಕ್ಕಳ ನಿರ್ದೇಶನಾಲಯವು ಮಾಹಿತಿ ನೀಡಿದ್ದು, 2021ರಿಂದ 2023ರವರೆಗೆ ರಾಜ್ಯದಲ್ಲಿ 1,347 ಅಂಥ ಮಕ್ಕಳಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿರ್ದೇಶನಾಲಯ ನೀಡಿದ್ದು, ಅವರಲ್ಲಿ 632 ಬಾಲಕಿಯರಿದ್ದಾರೆ. ರಕ್ಷಿಸುತ್ತಿದ್ದರೂ ಬಾಲಕ–ಬಾಲಕಿಯರು ಮತ್ತೆ ಭಿಕ್ಷಾಟನೆಗಿಳಿಯುತ್ತಿದ್ದಾರೆ.
ಕೂಸೆತ್ತಿಕೊಂಡು:
ಮೈಸೂರು ಸೇರಿದಂತೆ ಮಹಾನಗರಗಳ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಕ್ಕಳು ಭಿಕ್ಷೆ ಬೇಡುವುದು ಕಂಡುಬರುತ್ತಿದೆ. ಕಂಕುಳಲ್ಲಿ ಕೂಸು ಕೂರಿಸಿಕೊಂಡು ಹಣ ಕೇಳುತ್ತಾರೆ. ಕೆಲವರು, ಸಣ್ಣ ಬುಟ್ಟಿಯಲ್ಲಿ ದೇವರ ಫೋಟೊ ಅಥವಾ ವಿಗ್ರಹವನ್ನಿಟ್ಟುಕೊಂಡು ಭಿಕ್ಷೆಗೆ ನಿಲ್ಲುವುದು ಕಾಣಸಿಗುತ್ತಿದೆ. ಕೆಲವರ ಕೈ–ಕಾಲಿನಲ್ಲಿ ಗಾಯಗಳಿರುತ್ತವೆ.
‘ಬಾಲಭಿಕ್ಷಾಟನೆ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ ಎಂದು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಹೇಳುತ್ತದೆ. ಆದರೆ, ಇವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸದೆ, ಭಿಕ್ಷಾಟನೆಗೆ ಇಳಿಯುತ್ತಲೇ ಇರುತ್ತಾರೆ. ಅವರನ್ನು ಬೀದಿಗೆ ತಳ್ಳುವ ಜಾಲವೂ ಇದೆ’ ಎಂಬ ಆರೋಪವೂ ಇದೆ.
ಅಂಕಿ–ಅಂಶಗಳಿಂದಲೇ ದೃಢ:
‘ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಬಾಲಭಿಕ್ಷುಕರು ಹೆಚ್ಚಿದ್ದಾರೆ. ರಕ್ಷಿಸಿದ ಅಂಥ ಮಕ್ಕಳನ್ನು ಪೋಷಕರಿಗೇ ಒಪ್ಪಿಸಲಾಗುತ್ತಿದೆ. ಆ ಅಸಹಾಯಕರು ಅನಿವಾರ್ಯವಾಗಿ ಮತ್ತೆ ಭಿಕ್ಷಾಟನೆಗೆ ದೂಡುತ್ತಾರೆ. ಬಾಲಕಿಯರು ಲೈಂಗಿಕವಾಗಿ ದುರ್ಬಳಕೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಅಂಥವರ ಪುನರ್ವಸತಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್.
‘ಸಾಮಾನ್ಯ ಪುನರ್ವಸತಿ ಕಾರ್ಯಕ್ರಮಕ್ಕಿಂತ ಸಂಗೀತ, ನಾಟಕ, ವೈಜ್ಞಾನಿಕ ತಿಳಿವಳಿಕೆ, ಅನೌಪಚಾರಿಕ ಶಿಕ್ಷಣದಂತಹ ಚಟುವಟಿಕೆಗಳು ನಡೆಯಬೇಕಾಗಿದೆ. ಕೆಲವು ವರ್ಷಗಳು ಭಿಕ್ಷಾಟನೆಯಲ್ಲೇ ಇದ್ದವರನ್ನು ರಕ್ಷಿಸಿದರೂ, ಅವರಿಗೆ ಅದರತ್ತಲೇ ‘ಸೆಳೆತ’ವಿರುತ್ತದೆ. ಹೀಗಾಗಿ, ಅವರನ್ನು ಉತ್ತಮ ಮಾರ್ಗದಲ್ಲಿ ನಡೆಸುವಂತಹ ಪುನರ್ವಸತಿ ಅಗತ್ಯವಿದೆ’ ಎಂಬ ಸಲಹೆ ಅವರದು.
ಪ್ರಯೋಜನ ಆಗದು:
‘ಮಕ್ಕಳನ್ನು ರಕ್ಷಿಸಿ ಮತ್ತೆ ಭಿಕ್ಷಾಟನೆ ಮಾಡುವವರಿಗೇ ಒಪ್ಪಿಸಿದರೆ ಪ್ರಯೋಜನವಿಲ್ಲ. ಭಿಕ್ಷೆ ಕೇಳುವ ಅವರು ಮಾದಕ ವಸ್ತುಗಳ ದಾಸರಾಗುತ್ತಾರೆ. ಸರ್ಕಾರ ಇಂಥವರಿಗೆಂದೇ ಪ್ರತ್ಯೇಕವಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಪೋಷಕರ ಮನವೊಲಿಸಬೇಕು’ ಎಂದು ಅವರು ಹೇಳಿದರು.
‘ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕೇಂದ್ರಗಳನ್ನು ನಡೆಸಲು ನಗರ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸುತ್ತಿಲ್ಲ. ಮಕ್ಕಳನ್ನು ರಕ್ಷಿಸಿದ ನಂತರ ಏನು ಮಾಡುತ್ತೇವೆಂಬುದು ಬಹಳ ಮುಖ್ಯ. ಸರ್ಕಾರ ಆ ಮಾಹಿತಿಯನ್ನೇ ಕೊಡುತ್ತಿಲ್ಲ. ಜವಾಬ್ದಾರಿ ಇಲ್ಲದ ಪೋಷಕತ್ವದಿಂದ ಅಥವಾ ಅಸಹಾಯಕತೆಯಿಂದ ಮಕ್ಕಳ ಭವಿಷ್ಯ ಕಮರುತ್ತಿರುವುದನ್ನು ಗಮನಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.
ಬೆಂಗಳೂರು, ಕಲಬುರಗಿ, ಮೈಸೂರಲ್ಲಿ ಜಾಸ್ತಿ ಪುನರ್ವಸತಿ ಸಮರ್ಪಕವಾಗಿಲ್ಲ– ದೂರು ವಿಶೇಷ ಕಾರ್ಯಕ್ರಮ ಜಾರಿಗೆ ಸರ್ಕಾರಕ್ಕೆ ಮನವಿ
ಬಾಲಭಿಕ್ಷಾಟನೆಯಲ್ಲಿ ತೊಡಗಿದವರ ರಕ್ಷಣೆಗೆ ತುರ್ತು ಕ್ರಮ ಅಗತ್ಯ. ಅವರಿಗೆಂದೇ ಇರುವ ನಿಧಿ ಬಳಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದುಎಂ.ಎಲ್. ಪರಶುರಾಮ್ ನಿರ್ದೇಶಕ ಒಡನಾಡಿ ಸೇವಾ ಸಂಸ್ಥೆ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.