ADVERTISEMENT

ದಸರಾದಲ್ಲಿ ಬಲೂನ್‌ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿಯ ಬಂಧನ

ಬಲೂನ್‌ ಮಾರಲು ಕುಟುಂಬದೊಂದಿಗೆ ಬಂದಿದ್ದಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:05 IST
Last Updated 10 ಅಕ್ಟೋಬರ್ 2025, 5:05 IST
ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಾರ್ತಿಕ್‌ ತಡರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಾರ್ತಿಕ್‌ ತಡರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ಮೈಸೂರು: ಇಲ್ಲಿನ ವಸ್ತುಪ್ರದರ್ಶನ ಮೈದಾನದ ಬಳಿ ದಸರಾದಲ್ಲಿ ಬಲೂನ್‌ ಮಾರಾಟ ಮಾಡಲು ಕಲಬುರಗಿ ಮೂಲದ ಕುಟುಂಬದೊಂದಿಗೆ ಬಂದಿದ್ದ ಬಾಲಕಿಯನ್ನು (10) ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಮೃತದೇಹವು ಸಮೀಪದ ಚರಂಡಿಯಲ್ಲಿ ದೊರಕಿದೆ. ಶಂಕೆಯ ಮೇರೆಗೆ ನಜರಾಬಾದ್‌ ಠಾಣೆ ಪೊಲೀಸರು ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31) ಎಂಬಾತನನ್ನು ಬಂಧಿಸಿದ್ದಾರೆ. ಪೋಷಕರ ದೂರು ಆಧರಿಸಿ ಕೊಲೆ ಮತ್ತು ಪೋಕ್ಸೊ ಪ್ರಕರಣ ದಾಖಲಾಗಿದೆ. 

ಇಪ್ಪತ್ತು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಕುಟುಂಬದವರು, ಬುಧವಾರ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ತೆಪ್ಪೋತ್ಸವ ಮುಗಿದ ಕಾರಣ, ವ್ಯಾಪಾರ ಮುಗಿಸಿ ಗುರುವಾರ ಬೆಳಿಗ್ಗೆ ಊರಿಗೆ ಹಿಂದಿರುಗಲು ಸಿದ್ಧವಾಗಿದ್ದರು. 

‘ಶಂಕಿತನು ಬಾಲಕಿಯನ್ನು ಕೊಲೆ ಮಾಡಿದ ಬಳಿಕ, ವಸ್ತುಪ್ರದರ್ಶನ ಮೈದಾನದ ವಾಹನ ಪಾರ್ಕಿಂಗ್‌ ಸ್ಥಳದ ಹಿಂಭಾಗವಿರುವ ಚರಂಡಿ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದ, ಆಕೆಯ ಕಿವಿ, ಕೆನ್ನೆ, ಗಲ್ಲ ಕತ್ತರಿಸಲ್ಪಟ್ಟಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ದೊಡ್ಡಕೆರೆ ಮೈದಾನದ ಬಳಿಯ ಇಟ್ಟಿಗೆಗೂಡಿನ ಮಾನಸರ ರಸ್ತೆಯಲ್ಲಿ ಬಾಲಕಿಯ ಕುಟುಂಬ ಟೆಂಟ್‌ ಹಾಕಿ ನೆಲೆಸಿತ್ತು. ಬುಧವಾರ ರಾತ್ರಿ 12ಕ್ಕೆ ವ್ಯಾಪಾರ ಮುಗಿಸಿ ಬಂದು ಊಟ ಮಾಡಿ, ಟೆಂಟ್‌ನಲ್ಲಿ ತಂದೆಯೊಂದಿಗೆ ಮಲಗಿದ್ದಳು. ಗುರುವಾರ ಮುಂಜಾನೆ 4ಕ್ಕೆ ಮಳೆ ಬಂದಾಗ, ಟೆಂಟ್‌ನಲ್ಲಿದ್ದವರು ಬೇರೆ ಸ್ಥಳಕ್ಕೆ ತೆರಳಲು ಎದ್ದಾಗ ಬಾಲಕಿ ನಾಪತ್ತೆಯಾಗಿದ್ದು ಗೊತ್ತಾಯಿತು. ಹುಡುಕಾಟ ನಡೆಸಿದಾಗ ಬೆಳಿಗ್ಗೆ 6.30ರ ವೇಳೆಗೆ, ಟೆಂಟ್‌ನಿಂದ 50 ಮೀ ದೂರದಲ್ಲಿ ವಿವಸ್ತ್ರಗೊಂಡ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಯಿತು’ ಎಂದು ಮಾಹಿತಿ ನೀಡಿದರು. 

ಪೋಷಕರು ತಮಗೆ ಪರಿಚಯವಿದ್ದ ಆಟೊ ಚಾಲಕ ಮುಬಾರಕ್‌ ನೆರವಿನೊಂದಿಗೆ ನಜರ್‌ಬಾದ್‌ ಠಾಣೆಗೆ ತೆರಳಿ ಮಾಹಿತಿ ನೀಡಿದರು. ಸ್ಥಳಕ್ಕೆ ಡಿಸಿಪಿಗಳಾದ ಆರ್‌.ಎನ್‌. ಬಿಂದು ರಾಣಿ, ಕೆ.ಎಸ್‌. ಸುಂದರ್‌ ರಾಜ್‌ ಭೇಟಿ ನೀಡಿದರು. ಶ್ವಾನ ದಳ ತಂಡ ಪರಿಶೀಲನೆ ನಡೆಸಿತು. ಎಲ್ಲಾ ವ್ಯಾಪಾರಿಗಳನ್ನು ಸಿಎಆರ್‌ ಮೈದಾನಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಯಿತು.

‘ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಚಲನವಲನಗಳು ಪತ್ತೆಯಾಗಿವೆ. ಕಾರ್ತಿಕ್‌ ಈ ಹಿಂದೆ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಮದ್ಯ ವ್ಯಸನಿಯಾಗಿ ತಿರುಗಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.