ADVERTISEMENT

CM ಸ್ಥಾನ; ಡಿಕೆಶಿಗೆ 2ನೇ ಹಂತದಲ್ಲಿ ಅವಕಾಶವೆಂದು ವರಿಷ್ಠರು ಹೇಳಿದ್ದರು: ತನ್ವೀರ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 16:42 IST
Last Updated 28 ನವೆಂಬರ್ 2024, 16:42 IST
ತನ್ವೀರ್‌ ಸೇಠ್‌
ತನ್ವೀರ್‌ ಸೇಠ್‌   

ಮೈಸೂರು: ‘ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ, ಮೊದಲ ಹಂತದಲ್ಲಿ ಅವರು ಹಾಗೂ 2ನೇ ಹಂತದಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ವರಿಷ್ಠರು ಹೇಳಿದ್ದರು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್‌ ಸೇಠ್ ತಿಳಿಸಿದರು.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರ ಮೇಲೆ ಯಾವುದೋ ಆರೋಪ ಬಂದಿದ್ದರಿಂದ ಶೀಘ್ರದಲ್ಲೇ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಮಾಧ್ಯಮದಲ್ಲಿ ವಿಶ್ಲೇಷಣೆ–ಚರ್ಚೆ ನಡೆದವು. ಯಾರಿಗೆ ಹೇಗೆ ಬೇಕೋ ಹಾಗೆ ವಿಶ್ಲೇಷಿಸುತ್ತಿದ್ದಾರೆ’ ಎಂದರು.

‘ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಸಚಿವರ ಕಾರ್ಯವೈಖರಿಯನ್ನು ಗುರುತಿಸಿ, 7ರಿಂದ 9 ಮಂದಿಯನ್ನು ಕೈಬಿಡಬೇಕೆಂಬ ಕೂಗು ಲೋಕಸಭೆ ಚುನಾವಣೆ ನಂತರ ಕೇಳಿಬಂದಿದೆ. ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನ ಬಿಟ್ಟರೆ ಬೇರಾವುದೂ ಖಾಲಿ ಇಲ್ಲ. ಸಚಿವ ಸಂಪುಟಕ್ಕೆ ಸರ್ಜರಿ ಆಗುತ್ತದೆ; ಹೊಸಬರಿಗೆ ಅವಕಾಶ ಆಗುತ್ತದೆ ಎಂದೆಲ್ಲಾ ವರದಿಯಾಗುತ್ತಿದೆ. ನಾನೂ ವರಿಷ್ಠರೊಂದಿಗೂ ಮಾತನಾಡಿದ್ದು, ಅವಕಾಶ ಸಿಗುವವರೆಗೂ ಕಾಯುತ್ತೇನೆ ಎಂದು ತಿಳಿಸಿದ್ದೇನೆ. ಕೆಲಸ ಮಾಡುವ ಅವಕಾಶ ಸಿಕ್ಕರೆ ನಿರ್ವಹಿಸಲು ತಯಾರಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.