ADVERTISEMENT

ಮಕ್ಕಳ ಕಲಾಭಿವ್ಯಕ್ತಿಗೆ ‘ಡಿಎಚ್‌ಐಇ’ ವೇದಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 13:03 IST
Last Updated 14 ಫೆಬ್ರುವರಿ 2026, 13:03 IST
   

ಮೈಸೂರು: ಪುಟ್ಟ ಕೈಗಳಲಿದ್ದ ಕುಂಚಗಳು ಪ್ರಕೃತಿ ರಕ್ಷಣೆ, ಸಾಂಸ್ಕೃತಿಕ ಪರಂಪರೆ, ಹಬ್ಬ–ಹರಿದಿನಗಳ ಸಂಭ್ರಮಕ್ಕೆ ಜೀವ ತುಂಬಿದವು. ಸ್ಥಳದಲ್ಲಿಯೇ ನೀಡಿದ ವಿಷಯಗಳನ್ನು ಮನದಲ್ಲಿಯೇ ಮಥಿಸಿ, ತಾಳ್ಮೆಯಿಂದ ರೇಖೆಗಳನ್ನು ಎಳೆದು ಬಣ್ಣಗಳನ್ನು ತುಂಬಿ ಸೃಜಿಸಿದ ಚಿತ್ರಗಳು ಕಣ್ಮನ ಸೆಳೆದವು.

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಷನ್‌ (ಡಿಎಚ್ಐಇ)ವತಿಯಿಂದ ನಗರದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ‌ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಶಾಲೆಯಲ್ಲಿ ಶನಿವಾರ ನಡೆದ ಅಂತರಶಾಲಾ ಚಿತ್ರಕಲಾ ಸ್ಪರ್ಧೆಯು ಚಿಣ್ಣರ ಕ್ರಿಯಾತ್ಮಕ ಚಟುವಟಿಕೆಗೆ ವೇದಿಕೆಯಾಯಿತು.

ನಗರದ ವಿವಿಧ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಗಳನ್ನು ಬಿಡಿಸಿ ಸಂಭ್ರಮಿಸಿದರು. ಕೆಲ ಪೋಷಕರೂ ಆಗಮಿಸಿ ಮಕ್ಕಳಿಗೆ ಉತ್ಸಾಹ ತುಂಬಿದರು.

ADVERTISEMENT

‌ಕಾರ್ಯಕ್ರಮ ಉದ್ಘಾಟಿಸಿದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್, ‘ಚಿತ್ರಕಲೆಯು ಬಾಲ್ಯದಿಂದಲೇ ಜಾಗೃತವಾಗುತ್ತದೆ. ಮಕ್ಕಳು ತಮ್ಮ ಕಲ್ಪನೆಗೆ ರೂಪ ನೀಡುವ ಮೂಲಕ ಕ್ರಿಯಾಶೀಲರಾಗುತ್ತಾರೆ. 172 ವರ್ಷ ಇತಿಹಾಸದ ಸದ್ವಿದ್ಯಾ ಸಂಸ್ಥೆ ಹಾಗೂ ರಾಜ್ಯದ ಪ್ರಮುಖ ಪತ್ರಿಕೆಗಳಾದ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಮಕ್ಕಳ ಶೈಕ್ಷಣಿಕ, ಸೃಜನಾತ್ಮಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿವೆ. ಇಂಥ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿವೆ’ ಎಂದರು.

ದಿನಪತ್ರಿಕೆ ಓದಬೇಕು: ಸಂಸ್ಥೆಯ ಉಪಾಧ್ಯಕ್ಷ ಎಸ್.ಬಾಲಾಜಿ ಮಾತನಾಡಿ, ‘ಪತ್ರಿಕೆ ಓದುವುದು ಒಳ್ಳೆಯ ಅಭ್ಯಾಸ. ಪದಗಳ ಪರಿಚಯ, ಜಗತ್ತಿನ ಪ್ರಚಲಿತ ವಿದ್ಯಮಾನಗಳ ಪರಿಚಯ ಆಗುತ್ತದೆ. ಕಳೆದ 40 ವರ್ಷಗಳಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಓದುತ್ತಿದ್ದೇನೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಗೆಲುವಿನ ಪ್ರಥಮ ಹೆಜ್ಜೆ. ಚಿತ್ರಕಲೆಯು ಏಳು ಬಣ್ಣಗಳು ಬೆರೆತು ಬಿಳಿ ಬಣ್ಣವಾಗುವುದನ್ನು ತಿಳಿಸುತ್ತದೆ, ನಾವೆಲ್ಲ ಒಂದೇ ಎಂದು ಸಾರುತ್ತದೆ’ ಎಂದರು.

ಸದ್ವಿದ್ಯಾ ಶಾಲೆ ಮುಖ್ಯಶಿಕ್ಷಕ ರಾಮಚಂದ್ರ ಭಟ್‌ ಮಾತನಾಡಿ, ‘ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ ಪತ್ರಿಕೆಯು ವಿದ್ಯಾರ್ಥಿಗಳಿಗಾಗಿ ರೂಪುಗೊಂಡ ಪತ್ರಿಕೆ. ಐಎಎಸ್, ಕೆಎಎಸ್ ಮುಂತಾದ ಪರೀಕ್ಷೆಗಳ ಯಶಸ್ಸಿಗೆ ಅತ್ಯಂತ ಉಪಯುಕ್ತವಾಗಿದೆ’ ಎಂದು ಹೇಳಿದರು.

‘ಶಾಲೆಯ 300 ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ಓದುತ್ತಿದ್ದು, ಶೈಕ್ಷಣಿಕ ಸಾಧನೆಯಲ್ಲಿ ತೊಡಗಿದ್ದಾರೆ. ಶಾಲೆಯೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಮಕ್ಕಳ ಮನಸ್ಸು ವಿಕಾಸವಾಗಲು ಚಿತ್ರಕಲೆ ಅತ್ಯಂತ ಪ್ರಯೋಜನಕಾರಿ’ ಎಂದರು.

ಸ್ಪರ್ಧೆ: 4 ರಿಂದ 7ನೇ ತರಗತಿವರೆಗಿನ ಕಿರಿಯರ ವಿಭಾಗದಲ್ಲಿ ‘ನನ್ನ ನೆಚ್ಚಿನ ಪ್ರಾಣಿ’, ‘ಮರಗಳನ್ನು ಉಳಿಸಿ– ಭೂಮಿ ಉಳಿಸಿ’, ‘ಒಂದು ಮಾಂತ್ರಿಕ ಉದ್ಯಾನ’; 8ರಿಂದ 10ನೇ ತರಗತಿಯ ಹಿರಿಯರ ವಿಭಾಗದ ವಿದ್ಯಾರ್ಥಿಗಳಿಗೆ ‘ನನ್ನ ಶಾಲೆ’, ‘ಸ್ವಚ್ಛ ಪರಿಸರ’, ‘ಕುಟುಂಬದ ಹಬ್ಬಗಳು’ ಎಂಬ ವಿಷಯ ಕೊಡಲಾಗಿತ್ತು.

ತೀರ್ಪುಗಾರರಾಗಿ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನದ ವಿನ್ಯಾಸಕ ಎಚ್.ಎಸ್.ಧರ್ಮೇಂದ್ರ, ‘ಕಾವಾ’ ಅತಿಥಿ ಉಪನ್ಯಾಸಕರಾದ ಜಿ.ಮಹೇಶ್‌, ದೇಸಾಯಿ ಸೋಮೇಶ್‌ ಕಾರ್ಯನಿರ್ವಹಿಸಿದರು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಸಮಾಧಾನಕರ ಬಹುಮಾನ ನೀಡಲಾಯಿತು.

‘ಪೇಪರ್‌ಬೋಟ್’ ಜ್ಯೂಸ್‌ ಸಂಸ್ಥೆ ಸಹಕಾರ ನೀಡಿತು.

ಡೆಕ್ಕನ್ ಹೆರಾಲ್ಡ್ ಮೈಸೂರು ಬ್ಯೂರೋ ಮುಖ್ಯಸ್ಥ ಟಿ.ಆರ್.‌ಸತೀಶ್ ಕುಮಾರ್, ಟಿಪಿಎಂಎಲ್ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್. ಪ್ರಕಾಶ್, ಸೀನಿಯರ್‌ ಎಕ್ಸಿಕ್ಯುಟಿವ್‌ ಎಂ.ಎಸ್‌.ರಾಕೇಶ್‌, ಚಿತ್ರಕಲಾ ಶಿಕ್ಷಕಿ ಚಂದ್ರಕಲಾ ಎಂ.ಎನ್. ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ವಿಜಯಶ್ರೀ ಸ್ವಾಗತಿಸಿದರು. ಪನ್ನಗಾ ಹಾಡಿದರು. ಎಸ್.ಮಂಗಳಾ ನಿರೂಪಿಸಿದರು.

ಬಹುಮಾನ ವಿಜೇತರ ವಿವರ

ಚಿತ್ರಕಲಾ ಸ್ಪರ್ಧೆ ಹಿರಿಯರ ವಿಭಾಗ (8ರಿಂದ 10ನೇ ತರಗತಿ)

ಪ್ರಥಮ; ಡ್ಯಾನಿಶ್‌ ಅಹ್ಮದ್‌, ಡಿಪಿಎಸ್‌

ದ್ವಿತೀಯ; ಎಂ.ಧನುಶ್ರೀ, ಸದ್ವಿದ್ಯಾ ಪ್ರೌಢಶಾಲೆ

ತೃತೀಯ; ಎಸ್‌.ವಿ.ದರ್ಪಣ, ತಿರುಮಲ ಪಬ್ಲಿಕ್‌ ಶಾಲೆ

ಸಮಾಧಾನಕರ ಬಹುಮಾನ; ಎಸ್‌.ಕ್ಷಿತಿ(ಎಸ್‌ಜೆಸಿಎಸ್‌ವಿ), ಎಸ್‌.ಸಾಯಿ ದೀಕ್ಷಾ(ಜಿಎಸ್ಎಸ್‌ಎಸ್‌(ಬಿಎಂಎಸ್‌ಎಚ್‌ ಎಸ್‌)), ಡಿ.ಸ್ಕಂದ(ಸದ್ವಿದ್ಯಾ ಪ್ರೌಢಶಾಲೆ), ಎಂ.ಸುಭೀಕ್ಷಾ(ಐಡಿಯಲ್‌ ಜಾವಾ ರೋಟರಿ ಶಾಲೆ), ಆರ್‌.ವಿಶ್ರುತಾ(ಸೇಂಟ್ ಮಾರಿಯಾ ಡಿ ಮಥಿಯಾಸ್)

–––––––

ಕಿರಿಯರ ವಿಭಾಗ (4ರಿಂದ 7ನೇ ತರಗತಿ)

ಪ್ರಥಮ;ಅಭಿನಂದನ್‌ ಎಸ್‌.ಗವಿಮಠ್‌, ಬೇಡನ್ ಪೋವೆಲ್ ಪಬ್ಲಿಕ್‌ ಶಾಲೆ

ದ್ವಿತೀಯ;ನಿರ್ವ್ರಿತಿ ಪ್ರವೀಣ್‌, ಎನ್‌ಪಿಎಸ್‌ಐ

ತೃತೀಯ;ಸಿ.ಪ್ರಗತಿ ಶ್ರೀ, ಡೆಲ್ಲಿ ಪಬ್ಲಿಕ್‌ ಶಾಲೆ

ಸಮಾಧಾನಕರ ಬಹುಮಾನ;ಎಸ್‌.ನಕ್ಷತ್ರ(ಸಿಎಫ್‌ಟಿಆರ್‌ಐ), ಯು.ಯಶ್‌ ಗೌಡ(ನೈಪುಣ್ಯ), ರಿಷಿಕಾ ವರ್ಷ(ಕೆಎನ್‌ಸಿ ಇನೊವೇಟಿವ್‌ ಗ್ಲೋಬಲ್‌ ಶಾಲೆ), ಎಂ.ವಿವೇಕ್‌(ಈಶ್ವರ ವಿದ್ಯಾಲಯ), ಎಲ್‌.ಜಸ್ವಂತ್‌(ಸೇಂಟ್‌ ಫ್ರಾನ್ಸಿಸ್‌ ಶಾಲೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.