ADVERTISEMENT

ಕೆ.ಆರ್.ನಗರ | ‘2ಎ ಪ್ರವರ್ಗ’ಕ್ಕೆ ನಾಮಧಾರಿಗೌಡ: ಎಚ್‌.ಡಿ. ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 17:35 IST
Last Updated 11 ಜನವರಿ 2026, 17:35 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ

   

ಕೆ.ಆರ್.ನಗರ (ಮೈಸೂರು ಜಿಲ್ಲೆ): ‘ಅತ್ಯಂತ ಸಣ್ಣ ಪ್ರಮಾಣದಲ್ಲಿರುವ ನಾಮಧಾರಿಗೌಡ ಸಮುದಾಯವನ್ನು ‘2ಎ ಪ್ರವರ್ಗ’ಕ್ಕೆ ಸೇರಿಸುವ ಪ್ರಯತ್ನಕ್ಕೆ ಪ್ರಾಮಾಣಿಕವಾಗಿ ಬೆಂಬಲ ಕೊಡುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇಲ್ಲಿ ಭಾನುವಾರ ಭರವಸೆ ನೀಡಿದರು.

ಇಲ್ಲಿ, ನಾಮಧಾರಿಗೌಡ ಸಮುದಾಯ ಭವನದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒತ್ತಾಯದ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಯ ಪತ್ರಗಳನ್ನೂ ತನ್ನಿ’ ಎಂದು ಹೇಳಿದರು.

ADVERTISEMENT

‘ನಾಮಧಾರಿಗೌಡ ಸಮುದಾಯವು ರಾಜಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕಾಗಿದೆ. ನಮ್ಮನ್ನು ಗುರುತಿಸಬೇಕು ಎಂದು ಸಮುದಾಯದವರು ಕೇಳುತ್ತಲೇ ಇದ್ದಾರೆ. ನೋವು, ಆತಂಕ ಬಿಡಿ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.

ಸಣ್ಣ ಸಮುದಾಯಗಳಿಗೆ: ‘ಚಿಕ್ಕಮಗಳೂರು ಕಡೆ ಸಣ್ಣಪ್ರಮಾಣದಲ್ಲಿರುವ ಸರ್ಪಒಕ್ಕಲಿಗ ಸಮುದಾಯದ ಎಸ್.ಆರ್. ಲಕ್ಷ್ಮಯ್ಯ ಅವರನ್ನು ಎಚ್‌.ಡಿ.ದೇವೇಗೌಡರು ಎರಡು ಬಾರಿ ಶಾಸಕರಾಗಿ ಮಾಡಿದರು. ನಂತರ ಅವರ ಪುತ್ರ ಧರ್ಮೇಗೌಡರು 2 ಬಾರಿ ಪರಿಷತ್ ಸದಸ್ಯ, ಒಮ್ಮೆ ಉಪ ಸಭಾಪತಿ ಆದರು. ಅವರ ಇನ್ನೊಬ್ಬ ಪುತ್ರ ಎಸ್.ಎಲ್.ಭೋಜೇಗೌಡರು ನಮ್ಮ ಪಕ್ಷದಿಂದ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ’ ಎಂದು ತಿಳಿಸಿದರು.

‘ಅತಿ ಸಣ್ಣ ಉಪ್ಪಾರ ಸಮುದಾಯಕ್ಕೂ ಪಕ್ಷ ಅವಕಾಶ ಕೊಟ್ಟಿದೆ. ಎಚ್.ಸಿ.ನೀರಾವರಿ ಅವರನ್ನು ರಾಜಕೀಯಕ್ಕೆ ತಂದೆವು. ನಾಮಧಾರಿಗೌಡ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. ಸಮುದಾಯ ಭವನದ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇನೆ’ ಎಂದೂ ಭರವಸೆ ನೀಡಿದರು.

ಉಪ್ಪಾರ ಸರ್ಪ ಒಕ್ಕಲಿಗ ಸೇರಿ ಅನೇಕ ಸಣ್ಣ ಸಮುದಾಯಗಳಿಗೆ ಪಕ್ಷ ಅವಕಾಶ ಕಲ್ಪಿಸಿದೆ. ಸಣ್ಣ ಸಮುದಾಯಗಳನ್ನು ದೇವೇಗೌಡರು ಬೆಳೆಸಿದ್ದಾರೆ. ಆದರೆ ಹಿಂದುಳಿದ ನಾಯಕ ಎಂದು ಫಲಕ ಹಾಕಿಕೊಂಡು ಕೆಲವರು ಓಡಾಡುತ್ತಾರೆ. 
ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.