ADVERTISEMENT

15ಕ್ಕೆ ಒಪ್ಪಂದದ ಪ್ರತಿ ಸುಡುವ ಚಳವಳಿ: ಸಂಯುಕ್ತ ಕಿಸಾನ್‌ ಮೋರ್ಚಾ

ಈ ಒಪ್ಪಂದ ರೈತರ ಮರಣ ಶಾಸನ: ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ಜಗಜಿತ್ ಸಿಂಗ್ ದಲೈವಾಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:08 IST
Last Updated 12 ಫೆಬ್ರುವರಿ 2026, 0:08 IST
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ನಡೆದ ರೈತ ಜಾಗೃತಿ ಯಾತ್ರೆಯಲ್ಲಿ ಸೋನುವಾಲ, ಅಭಿಮನ್ಯು ಕೋಹರ್, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಜಗಜಿತ್ ಸಿಂಗ್ ದಲೈವಾಲ, ಕುರುಬೂರು ಶಾಂತಕುಮಾರ್, ಬಲ್ಲೂರು ರವಿಕುಮಾರ್ ಹಾಗೂ ಹರ್ಸುಲಿಂದರ್ ಸಿಂಗ್‌ ಪಾಲ್ಗೊಂಡರು
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ನಡೆದ ರೈತ ಜಾಗೃತಿ ಯಾತ್ರೆಯಲ್ಲಿ ಸೋನುವಾಲ, ಅಭಿಮನ್ಯು ಕೋಹರ್, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಜಗಜಿತ್ ಸಿಂಗ್ ದಲೈವಾಲ, ಕುರುಬೂರು ಶಾಂತಕುಮಾರ್, ಬಲ್ಲೂರು ರವಿಕುಮಾರ್ ಹಾಗೂ ಹರ್ಸುಲಿಂದರ್ ಸಿಂಗ್‌ ಪಾಲ್ಗೊಂಡರು   
ಅಮೆರಿಕ ಜೊತೆಗಿನ ಒಪ್ಪಂದ ರೈತರಿಗೆ ಮರಣಶಾಸನ | ಒಪ್ಪಂದ ಪರಿಣಾಮ ಕುರಿತು ಗ್ರಾಮಗಳಲ್ಲಿ ಜಾಗೃತಿ | ವಿದೇಶಗಳಲ್ಲಿರುವಂತೆ ಇಲ್ಲೂ ರೈತರಿಗೆ ಸೌಲಭ್ಯ ನೀಡಿ

ಮೈಸೂರು: ‘ಅಮೆರಿಕಾ–ಭಾರತ ವ್ಯಾಪಾರ ಒಪ್ಪಂದದ ಪ್ರತಿಯನ್ನು ಸುಡುವ ಚಳವಳಿಯು  ಫೆ. 15ರಂದು ದೇಶದಾದ್ಯಂತ ನಡೆಯಲಿದ್ದು, ರೈತರು ತೋಳಿಗೆ ಕಪ್ಪುಪಟ್ಟಿ ಧರಿಸಿ ಭಾಗವಹಿಸುವರು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲ ಬುಧವಾರ ಇಲ್ಲಿ ಹೇಳಿದರು.

ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಕನ್ಯಾಕುಮಾರಿಯಿಂದ ದೆಹಲಿವರೆಗೆ ಕೈಗೊಂಡಿರುವ ಜಾಗೃತಿ ಯಾತ್ರೆ ಅಂಗವಾಗಿ ಇಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಈ ಒಪ್ಪಂದದ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಕೇಂದ್ರ ಸಚಿವರು ಹಾಗೂ ಅಮೆರಿಕದ ವಿಭಿನ್ನ ಹೇಳಿಕೆಗಳು ಶಂಕೆ ಮೂಡಿಸಿವೆ. ಕೃಷಿ ಉತ್ಪನ್ನಗಳ ಆಮದಿಗೆ ಕೇಂದ್ರ ಹಸಿರು ನಿಶಾನೆ ತೋರಿದ್ದು, ಈ ಒಪ್ಪಂದವು ದೇಶದ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಪ್ರತಿ ಹಳ್ಳಿಯ ರೈತರಲ್ಲಿ ಈ ಒಪ್ಪಂದದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 7ರಂದು ಕನ್ಯಾಕುಮಾರಿಯಲ್ಲಿ ಜಾಗೃತಿ ಯಾತ್ರೆ ಆರಂಭಗೊಂಡಿದ್ದು, 40 ದಿನ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿದೆ. ಮಾ.19 ರಂದು ದೆಹಲಿಯಲ್ಲಿ ಸಮಾರೋಪಗೊಳ್ಳಲಿದ್ದು, ದೇಶದ ರೈತರ ಸಹಿಗಳಿರುವ ಪತ್ರಗಳನ್ನು ಪ್ರಧಾನಿ ಅವರಿಗೆ ಸಲ್ಲಿಸುತ್ತೇವೆ. ಆದರೆ, ನಮ್ಮ ಹೋರಾಟ ಅಷ್ಟಕ್ಕೇ ನಿಲ್ಲದು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ಒಪ್ಪಂದ ಜಾರಿಯಾದರೆ ನಾವು ಅಮೆರಿಕದ ರೈತರ ಜೊತೆಗೆ ಪೈಪೋಟಿಗೆ ಇಳಿಯಬೇಕಾಗುತ್ತದೆ. ಅಲ್ಲಿ ಕೃಷಿಗೆ ಸರ್ಕಾರ ಭಾರೀ ಸಬ್ಸಿಡಿ ಸಿಗಲಿದೆ. ನಮ್ಮಲ್ಲಿ ಆ ವ್ಯವಸ್ಥೆ ಇದೆಯೇ’ ಎಂದು ಪ್ರಶ್ನಿಸಿದರು. 

ಸಾನ್ನಿಧ್ಯ ವಹಿಸಿದ್ದ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ‘ಸರ್ಕಾರಗಳು ಇನ್ನಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೃಷಿಕರ ಬದುಕು ಬುಡಮೇಲು ಮಾಡುವ ಯೋಜನೆಗಳನ್ನು ಬಿಡಬೇಕು. ವಿದೇಶಗಳಲ್ಲಿ ಇರುವಂತೆ ಇಲ್ಲಿಯೂ ರೈತರಿಗೆ ಸೌಲಭ್ಯಗಳು ಸಿಗಬೇಕು’ ಎಂದು ಆಶಿಸಿದರು.

ಮುಖಂಡರಾದ ಹರಿಯಾಣದ ಅಭಿಮನ್ಯು ಕೋಹರ್, ಉತ್ತರ ಪ್ರದೇಶದ ನಿತಿನ್ ಬಾಲ್ಯನ, ರಾಜಸ್ಥಾನದ ಇಂದ್ರಜಿತ್ ಪಲ್ಲಿವಾನ್, ಮಧ್ಯಪ್ರದೇಶದ ಲೀಲಾಧರ್ ರಜಪೂತ್, ಅರುಣ್ ಪಟೇಲ್, ಪಂಜಾಬ್‌ನ ಹರ್ಸುಲಿಂದರ್ ಸಿಂಗ್, ರಾಜ್ಯದ ಹತ್ತಳ್ಳಿ ದೇವರಾಜ್, ಬಡಡನಪುರ ನಾಗರಾಜ್, ಬಲ್ಲೂರು ರವಿಕುಮಾರ್, ಲಕ್ಷ್ಮೀದೇವಿ ಅವರು ಸಮಾವೇಶದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.