
ಮೈಸೂರು: ರೋಟರಿ ಮೀನ್‌ಸ್ ಬಿಸಿನೆಸ್ (ಆರ್‌ಎಂಬಿ)– ಮೈಸೂರು ಚಾಪ್ಟರ್ ವತಿಯಿಂದ ಆರ್‌ಎಂಬಿ ಅಂತರರಾಷ್ಟ್ರೀಯ ವ್ಯಾಪಾರ ಮೇಳ–2026ರ ‘ಕರ್ಟನ್ ರೈಸರ್’ ಕಾರ್ಯಕ್ರಮ ನಡೆಯಿತು.
ಮೇಳವು 2026ರ ಮೇ 8, 9 ಮತ್ತು 10ರಂದು ನಡೆಯಲಿರುವ ಬಗ್ಗೆ ರಾಜರಾಜೇಶ್ವರಿ ನಗರದ ಅಟ್‌ಮಾಸ್ಪಿಯರ್ ಹೋಟೆಲ್‌ನಲ್ಲಿ ಘೋಷಿಸಲಾಯಿತು. 140ಕ್ಕೂ ಹೆಚ್ಚು ಆರ್‌ಎಂಬಿ ಸದಸ್ಯರು, ವಿವಿಧ ರೋಟರಿ ಮತ್ತು ವಾಣಿಜ್ಯ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಉದ್ಘಾಟಿಸಿದ ರಂಗ್‌ಸನ್ಸ್ ಏರೊಸ್ಪೇಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪವನ್‌ಗುರು ರಂಗ, ‘ಮೈಸೂರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರುವುದಕ್ಕೂ ಮುನ್ನವೇ ಅಂತರರಾಷ್ಟ್ರೀಯ ವ್ಯಾಪಾರ ಮೇಳ ಆಯೋಜಿಸಿರುವುದು ದೂರದೃಷ್ಟಿಯ ಮತ್ತು ಧೈರ್ಯದ ಹೆಜ್ಜೆ. ಇದು ಮೈಸೂರು ಜಾಗತಿಕ ವ್ಯಾಪಾರಕ್ಕೆ ಸಿದ್ಧವಾಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಶ್ಲಾಘಿಸಿದರು.
‘ಈ ಮೇಳವು ದೊಡ್ಡ ಮತ್ತು ಸಣ್ಣ- ಮಧ್ಯಮ ಉದ್ಯಮಗಳಿಗೆ ಸಮಾನ ಅವಕಾಶ ನೀಡುವ ವೇದಿಕೆಯಾಗಲಿದೆ. ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ. ಇಂತಹ ಕಾರ್ಯಕ್ರಮಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕನಸು ನನಸಿಗೆ ಸಹಕಾರಿಯಾಗುತ್ತವೆ’ ಎಂದರು.
ಆರ್‌ಎಂಬಿ ಮೈಸೂರು ಅಧ್ಯಕ್ಷ ನಾಗೇಶ್ ಎಂ.ಎಲ್. ಮಾತನಾಡಿ, ‘ಮೇಳವು ಮೈಸೂರನ್ನು ಜಾಗತಿಕ ವ್ಯಾಪಾರ ಕೇಂದ್ರವನ್ನಾಗಿ ರೂಪಿಸುವ ಜೊತೆಗೆ, ನಗರದ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸಲಿದೆ’ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ವ್ಯಾಪಾರ ಮೇಳದ ಅಧ್ಯಕ್ಷ ಪ್ರಶಾಂತ್ ಎಸ್.ಎ., ‘ಮೈಸೂರಿನ ಎಲ್ಲಾ ವ್ಯಾಪಾರ ಹಾಗೂ ವಾಣಿಜ್ಯ ಸಂಘಟನೆಗಳಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ’ ಎಂದು ಹೇಳಿದರು.
ಕಾರ್ಯದರ್ಶಿ ಕೇಶವ ಬಿದ್ರೆ, ಖಜಾಂಚಿ ಪಿ.ಕಿರಣ್ ಕುಮಾರ್, ಮಾರುಕಟ್ಟೆ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸುಧೀಂದ್ರ, ಅಥರ್ವ ಬ್ರಾಂಡಿಂಗ್‌ನ ವ್ಯವಸ್ಥಾಪಕ ಪಾಲುದಾರ ಬಿಲಾಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.