
ಮೈಸೂರು: 'ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಿದ್ದಾರೆ. ಫೆ.18ರಂದು ಬೆಳಿಗ್ಗೆ 11ಕ್ಕೆ ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, '22ರಂದು ಸಂಜೆ 4ಕ್ಕೆ ಕೆ.ಆರ್.ನಗರ, 24ರಂದು ತಿ.ನರಸೀಪುರ, 25ರಂದು ಬೆಳಿಗ್ಗೆ 11ಕ್ಕೆ ಹುಣಸೂರಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎಚ್.ಡಿ.ಕೋಟೆ, ವರುಣ, ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮಗಳನ್ನು ಸದ್ಯದಲ್ಲಿಯೇ ನಿರ್ಧರಿಸಲಾಗುವುದು' ಎಂದು ತಿಳಿಸಿದರು.
'ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮರಳಿ ತರುವ ಸಂಕಲ್ಪದ ಕಾರ್ಯಕ್ರಮ ಇದಾಗಿದೆ. ಜನರು ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ. ಗುತ್ತಿಗೆದಾರರಿಂದಲೂ ಆಕ್ಷೇಪ ವ್ಯಕ್ತವಾಗಿದೆ' ಎಂದರು.
'ರಾಜ್ಯದ ಸಾಲ ₹ 7 ಲಕ್ಷ ಕೋಟಿ ದಾಟಿದೆ. ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡರೆಂಬುದು ಮುಖ್ಯ. ಡಿ.ದೇವರಾಜ ಅರಸು ಎಲ್ಲರಿಗೂ ಭೂಮಿ ನೀಡಿದರು. ಸಿದ್ದರಾಮಯ್ಯ ಅವರು ಸಾಲದ ಹೊರೆ ಹಾಕಿದ್ದಾರೆ. ಜನಸಾಮಾನ್ಯರ ಜೀವನ ದುಬಾರಿಯಾಗಿದೆ' ಎಂದು ಹೇಳಿದರು.
'ಕೆರೆ ಒತ್ತುವರಿ ಜಿಲ್ಲೆಯಾದ್ಯಂತ ನಡೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಾಹನಗಳು ಚೆನ್ನಾಗಿದ್ದರೂ ಅವುಗಳನ್ನು ಹರಾಜಿನ ಮೂಲಕ ಗುಜರಿ ಹಾಕಲಾಗಿದೆ. ಪ್ರಾಧಿಕಾರದಲ್ಲಿ ಜನರ ಕೆಲಸ ನಡೆಯುತ್ತಿಲ್ಲ. ಆರ್ ಟಿಐ ಕಾರ್ಯಕರ್ತರೊಬ್ಬರು ಎಂಡಿಎ ಸಿಹಿ ಹಂಚುವ ಕೆಲಸ ಮಾಡಿದ್ದಾರೆ. ಯಾವ ಕಾರಣಕ್ಕಾಗಿ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ' ಎಂದು ಪ್ರಶ್ನಿಸಿದರು.
'ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು' ಎಂದರು.
'ಮನೆಯಲ್ಲೊಬ್ಬರು ಮುಖ್ಯಮಂತ್ರಿ ಆಗಿದ್ದರಿಂದ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರೊಬ್ಬರನ್ನು ಪರಿಷತ್ ಸದಸ್ಯರನ್ನಾಗಿ ಮಾಡಬಹುದಿತ್ತು. ಆದರೆ, ಪುತ್ರನನ್ನೇ ಆ ಸ್ಥಾನದಲ್ಲಿ ಕೂರಿಸಿದರು' ಎಂದರು.
'17 ಸಲ ಬಜೆಟ್ ಮಂಡಿಸಿದವರು ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಲ್ಲವಾಗಿದೆ. ಬೆಲೆ ಏರಿಕೆ ತಡೆಯುವುದನ್ನು ಬಿಟ್ಟು ಶಾಸಕರ ಪ್ರವಾಸ ಆಯೋಜಿಸಿ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ. ಎಲ್ಲ ನಿಗಮಗಳ ಅಧ್ಯಕ್ಷರಿಗೂ ಸಂಪುಟದರ್ಜೆ ಸ್ಥಾನಮಾನ ನೀಡಿದ್ದಾರೆ. ಮೂರು ವರ್ಷವಾದರೂ ಬಡವರಿಗೆ ಮನೆ ಕೊಟ್ಟಿಲ್ಲ. ತವರು ಜಿಲ್ಲೆಯಲ್ಲಾದರೂ ಸೂರು ವಿತರಿಸಿ' ಎಂದು ಕೋರಿದರು.
ಶಾಸಕ ಜಿ.ಡಿ.ಹರೀಶ್ ಗೌಡ, 'ನಿಖಿಲ್ ಕುಮಾರಸ್ವಾಮಿ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಮೂಲಕ ಈಗಾಗಲೇ 9 ಸಾವಿರ ಕಿ.ಮೀ ಕ್ರಮಿಸಿ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಗೊಳಿಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಅಭಿಯಾನದಲ್ಲಿ ಅಭಿಮಾನಿಗಳು, ಜನರು ಪಾಲ್ಗೊಳ್ಳಬೇಕು' ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಸಿ.ಅಶ್ವಿನ್ ಕುಮಾರ್, ನಗರ ಘಟಕದ ಅಧ್ಯಕ್ಷ ಎಸ್ ಬಿಎಂ ಮಂಜುನಾಥ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಮಹದೇವ್, ಭಾಗ್ಯಮ್ಮ, ದ್ವಾರಕೀಶ್, ಅಭಿಷೇಕ್, ಎಂ.ರವಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.