ADVERTISEMENT

ಬಿಜೆಪಿ ಪಥ್ಯವಾಗದಿದ್ದರೆ ಇದ್ದೀರೇಕೆ: ವಿಶ್ವನಾಥ್‌ಗೆ ಸಂಸದ ಪ್ರತಾಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 9:14 IST
Last Updated 17 ಡಿಸೆಂಬರ್ 2022, 9:14 IST
ಎ.ಎಚ್.ವಿಶ್ವನಾಥ್ ಮತ್ತು ಪ್ರತಾಪ ಸಿಂಹ
ಎ.ಎಚ್.ವಿಶ್ವನಾಥ್ ಮತ್ತು ಪ್ರತಾಪ ಸಿಂಹ   

ಮೈಸೂರು: ‘ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್ ಅವರಿಗೆ ಬಿಜೆಪಿಯ ತತ್ವ–ಸಿದ್ಧಾಂತಗಳು ಪಥ್ಯವಾಗದಿದ್ದರೆ ಪಕ್ಷದಲ್ಲಿರಬೇಕೇಕೆ, ಬೇರೆ ಕಡೆಗೆ ಹೋಗಬಹುದಲ್ಲವೇ?’ ಎಂದು ಬಿಜೆಪಿಯ ಸಂಸದ ಪ್ರತಾಪ ಸಿಂಹ ಕೇಳಿದರು.

ಸ್ವಪಕ್ಷೀಯ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ವಿಶ್ವನಾಥ್ ಟೀಕಾಪ್ರಹಾರ ನಡೆಸಿರುವ ಬಗ್ಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಪ್ರತಾಪ, ‘ಪಕ್ಷದಲ್ಲೇ ಇದ್ದುಕೊಂಡು ಪಕ್ಷದವರನ್ನೇ ಮಾತುಗಳ ಮೂಲಕ ನಿತ್ಯವೂ ಚುಚ್ಚುವುದು, ತಿವಿಯುವುದನ್ನು ಅವರು ಬಿಡಬೇಕು’ ಎಂದರು.

‘ವಿಶ್ವನಾಥ್ ಬಗ್ಗೆ ಬೇಸತ್ತಿರುವ ಜನರು, ಈಗಾಗಲೇ ಚುನಾವಣೆಯಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಆದರೂ ಬುದ್ಧಿ ಕಲಿಯುತ್ತಿಲ್ಲವಲ್ಲಾ’ ಎಂದು ಪ್ರಶ್ನಿಸಿದರು.

ADVERTISEMENT

‘ಶ್ರೀನಿವಾಸ ಪ್ರಸಾದ್ ಅತ್ಯಂತ ‌ಹಿರಿಯ ರಾಜಕಾರಣಿ. ಎಲ್ಲ ಸಮಾಜದವರಿಗೂ ಅವರ ಬಗ್ಗೆ ಗೌರವವಿದೆ. ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರು ಏನೇ ಹೇಳಿದರೂ ಒಂದು ತೂಕವಿರುತ್ತದೆ. ಅವರ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೂ ನನಗೆ ವೈಯಕ್ತಿಕವಾಗಿ ನೋವಾಗುತ್ತದೆ’ ಎಂದು ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.