ADVERTISEMENT

‘ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ’ ಹೇಳಿಕೆ ಸಮರ್ಥಿಸಿಕೊಂಡ ಯತೀಂದ್ರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 8:22 IST
Last Updated 5 ಜನವರಿ 2024, 8:22 IST
<div class="paragraphs"><p>ಡಾ. ಯತೀಂದ್ರ ಸಿದ್ದರಾಮಯ್ಯ</p></div>

ಡಾ. ಯತೀಂದ್ರ ಸಿದ್ದರಾಮಯ್ಯ

   

ಮೈಸೂರು: ‘ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ’ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ‘ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಒಪ್ಪುವವರ‍್ಯಾರೂ ನನ್ನ ಹೇಳಿಕೆಯನ್ನು ತಪ್ಪು ಎನ್ನುವುದಿಲ್ಲ’ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯ ಮಾಯಕೊಂಡದಲ್ಲಿ ಈಚೆಗೆ ತಾವು ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಅಂಬೇಡ್ಕರ್ ಅವರು ಹೇಳಿರುವುದನ್ನೇ ನಾನು ಮತ್ತೆ ಹೇಳಿದ್ದೇನಷ್ಟೆ’ ಎಂದರು.

ADVERTISEMENT

‘ನಮ್ಮ ದೇಶ ಜ್ಯಾತ್ಯತೀತವಾಗಿರಬೇಕು. ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅದು ಯಾವತ್ತಿದ್ದರೂ ಅಪಾಯಕಾರಿ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಕೆಲವು ದೇಶಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದಾಗಿಯೇ ನಾನು, ಹಿಂದೂ ರಾಷ್ಟ್ರವಾಗುವುದು ಅಪಾಯಕಾರಿ ಎಂದು ಹೇಳಿದ್ದೇನೆ. ನನ್ನ ಮಾತಿಗೆ ಈಗಲೂ ಬದ್ಧ. ನಾನು ಹೇಳಿರುವುದರಲ್ಲಿ ತಪ್ಪೇನಿಲ್ಲ’ ಎಂದು ತಿಳಿಸಿದರು.

‘ಧರ್ಮದ ಕೆಲಸವನ್ನು ಸರ್ಕಾರ ಮಾಡುವುದಲ್ಲ. ಆ ವಿಚಾರಕ್ಕೆ ಬೇರೆ ವ್ಯವಸ್ಥೆಗಳಿವೆ. ಇದು ಸರ್ಕಾರದ ಕೆಲಸವಾಗಬಾರದು’ ಎಂದರು.

‘ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಸುತ್ತಿದೆ. ಧರ್ಮದ ವಿಚಾರ ಮುಂದಿಟ್ಟುಕೊಂಡು ಇತರ ವಿಚಾರಗಳನ್ನು ಆ ಪಕ್ಷದವರು ಮರೆ ಮಾಚುತ್ತಿದ್ದಾರೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ’ ಎಂಬ ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಯತೀಂದ್ರ, ‘ಅವರು ತಮ್ಮನ್ನು ರಾಷ್ಟ್ರೀಯ ನಾಯಕ ಎಂದುಕೊಂಡಿದ್ದಾರೆ. ಟಾರ್ಗೆಟ್ ಮಾಡಲು ಇವರೇನು ನ್ಯಾಷನಲ್‌ ಲೀಡರ್ರಾ? ಕೇವಲ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರಷ್ಟೆ. ನನ್ನ ತಂದೆ ಎಂದಿಗೂ ಟಾರ್ಗೆಟ್ ರಾಜಕಾರಣ ಮಾಡಿಲ್ಲ. ರಾಜಕೀಯವಾಗಿ ಅನೇಕ ಬಾರಿ ಅನ್ಯಾಯ ಮಾಡಿದವರ ವಿರುದ್ಧವೂ ರಾಜಕಾರಣ ಮಾಡಿದವರಲ್ಲ’ ಎಂದು ಹೇಳಿದರು.

‘ಸಂಸದರ ತಮ್ಮ ವಿಕ್ರಂ ಸಿಂಹ ಮರ ಕಡಿದ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ. ಅದಕ್ಕಾಗಿ ಪ್ರಕರಣ ದಾಖಲಾಗಿದೆಯಷ್ಟೆ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತು? ತಮ್ಮನ ತಪ್ಪು ಮುಚ್ಚಿಕೊಳ್ಳಲು ಸಂಸದರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದರಲ್ಲಿ ನನ್ನ ರಾಜಕೀಯ ಭದ್ರತೆಯೆ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ನೀವೇ ಸ್ಪರ್ಧಿಸಬೇಕು ಎಂದು ಪಕ್ಷ ಹೇಳಿದರೆ, ಆ ತೀರ್ಮಾನಕ್ಕೆ ಬದ್ಧವಿದ್ದೇನೆ. ಈವರೆಗೂ ಆ ಬಗ್ಗೆ ಯೋಚಿಸಿಲ್ಲ. ಟಿಕೆಟ್ ಸಿಕ್ಕವರನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಈ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.