ADVERTISEMENT

ರಂಜಿಸಿದ ಮಹಿಳೆಯರ ಕುರುಕ್ಷೇತ್ರ: ಜಲವಾಸುದೇವ ನಾಟಕ ಸಭಾದ ಪ್ರಯೋಗ

ಕಲಾಮಂದಿರದಲ್ಲಿ ಜಲವಾಸುದೇವ ನಾಟಕ ಸಭಾದ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 10:00 IST
Last Updated 10 ಜುಲೈ 2022, 10:00 IST
ಜಲವಾಸುದೇವ ನಾಟಕ ಸಭಾದಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸ್ತ್ರೀಯರಿಂದ ‘ಕುರುಕ್ಷೇತ್ರ’ ನಾಟಕ ಪ್ರದರ್ಶನವನ್ನು ಬಿ.ವಿ. ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸಿದರು. ಚಲನಚಿತ್ರ ನಟ ರೂಪಾ ಅಯ್ಯರ್, ಎಸ್.ನಾರಾಯಣ್, ಕೆ.ಮಧುಸೂದನ್, ಮಧು ಸುಬ್ಬಣ್ಣ, ಬಿ. ನೀಲಾಂಬಿಕಾ ಇದ್ದಾರೆ/ ಪ್ರಜಾವಾಣಿ ಚಿತ್ರ
ಜಲವಾಸುದೇವ ನಾಟಕ ಸಭಾದಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸ್ತ್ರೀಯರಿಂದ ‘ಕುರುಕ್ಷೇತ್ರ’ ನಾಟಕ ಪ್ರದರ್ಶನವನ್ನು ಬಿ.ವಿ. ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸಿದರು. ಚಲನಚಿತ್ರ ನಟ ರೂಪಾ ಅಯ್ಯರ್, ಎಸ್.ನಾರಾಯಣ್, ಕೆ.ಮಧುಸೂದನ್, ಮಧು ಸುಬ್ಬಣ್ಣ, ಬಿ. ನೀಲಾಂಬಿಕಾ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ಕಲಾಮಂದಿರದಲ್ಲಿ ಮಹಿಳೆಯರು ಹಾಗೂ ಯುವತಿಯರು ಭಾನುವಾರ ಅಭಿನಯಿಸಿದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನವು ಪ್ರೇಕ್ಷಕರ ಮನ ರಂಜಿಸಿ ಮೆಚ್ಚುಗೆಗೆ ಪಾತ್ರವಾಯಿತು.

ಮೈಸೂರು, ನಂಜನಗೂಡು, ಕುಲಗಣಂ ಜಲವಾಸುದೇವ ನಾಟಕ ಸಭಾದಿಂದ ಎಸ್.ಭಾಷ್ಯಂ ಪುಣ್ಯಸ್ಮರಣಾರ್ಥ ಆಯೋಜಿಸಿದ್ದ ನಾಟಕ ‘ತುಂಬಿದ ಗೃಹ’ದ ಪ್ರದರ್ಶನ ಕಂಡಿತು. ನಗರದವರೊಂದಿಗೆ ತಾಲ್ಲೂಕಿನ ಹಳ್ಳಿಗಳು, ನಂಜನಗೂಡು, ಕುಲಗಣಂ ಮೊದಲಾದ ಕಡೆಗಳಿಂದಲೂ ಬಂದಿದ್ದ ನಾಟಕ ಪ್ರಿಯರು ಮಹಿಳೆಯರ ಅಭಿಯನಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.

ವೈಷ್ಣವಿ ಆರ್. (1ನೇ ಕೃಷ್ಣ), ಅರ್ಚನಾ ಬಾಲಾಜಿ (ಭೀಮ), ವಿಮಲಾ ಗೋಪಾಲನ್‌ (2ನೇ ಕೃಷ್ಣ), ರತ್ನಾ ವೆಂಕಟೇಶ್ (ಕರ್ಣ), ಸಮೀಕ್ಷಾ ಕೃಷ್ಣನ್ (ಅಶ್ವತ್ಥಾಮ), ಸಂತೃಪ್ತಿ ಸತ್ಯನ್ (ಅಭಿಮನ್ಯು), ಸಂಪ್ರೀತಾ ಸತ್ಯನ್ (ಅರ್ಜುನ, ಸೈಂಧವ), ವಿಜಯರನ್ನ ಕೆ.ಎಸ್. (ಧೃತರಾಷ್ಟ್ರ), ಸಿಂಧು ಅಭಿನಂದನ್ (ಸಾತ್ಯಕಿ), ಕೀರ್ತಿಶ್ರೀ ಜಿ. (ವಿಧುರ), ರೂಪಶ್ರೀ (ದ್ರೌಪದಿ), ಸುಶೀಲಾ (ಭೀಷ್ಮ), ಎನ್‌.ಲೀಲಾವತಿ (ಗಾಂಧಾರಿ ಕುಂತಿ), ವಿಜಯಶ್ರೀ ಶ್ರೀನಾಥ್ (ದುರ್ಯೋಧನ), ರಂಜನಾ ಲಕ್ಷ್ಮೀಶ (ಅರ್ಜುನ), ಲಕ್ಷ್ಮಿ (ಉತ್ತರೆ), ದೀಪಶ್ರೀ ಶ್ರೀಹರಿ (ಧರ್ಮರಾಯ), ವಸಂತ ರಾಮು (ದುಶ್ಯಾಶನ), ಲಕ್ಷ್ಮಿ ಗೋ‍ಪಾಲಕೃಷ್ಣ (ಶಕುನಿ) ಮತ್ತು ರೂಪಾ ಎಂ.ಆರ್. (ರುಕ್ಮಿಣಿ, ಸುಭದ್ರೆ) ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ADVERTISEMENT
ಶ್ರೀ ಜಲವಾಸುದೇವ ನಾಟಕ ಸಭಾ ಆಯೋಜಿಸಿದ ಸ್ತ್ರೀಯರಿಂದ ’ಕುರುಕ್ಷೇತ್ರ’ ನಾಟಕ ಪ್ರದರ್ಶನ

ಹಲವು ತಿಂಗಳುಗಳಿಂದ ಅಭ್ಯಾಸ ಮಾಡಿದ್ದ ಕಲಾವಿದೆಯರು ನಟನಾ ಪ್ರತಿಭೆ ಪ್ರದರ್ಶಿಸಿ, ನೆರೆದಿದ್ದವರ ಸಿಳ್ಳೆ–ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡರು. ಆ ಕ್ಷಣವನ್ನು ಕಣ್ತುಂಬಿಕೊಂಡ ಕುಟುಂಬದವರು–ಬಂಧುಗಳಲ್ಲೂ ಹೆಮ್ಮೆಯ ಭಾವ ವ್ಯಕ್ತವಾಯಿತು. ಕಲಿಸಿದ ಗುರುಗಳಲ್ಲೂ ಅಭಿಮಾನ ತುಂಬಿ ಬಂತು. ಕೀಬೋರ್ಡ್‌ನಲ್ಲಿ ಎಚ್‌.ಪಿ. ನಾಗೇಂದ್ರಪ್ರಸಾದ್, ತಬಲಾದಲ್ಲಿ ಶಿವಕುಮಾರ್ ಹಾಗೂ ತಾಳ ವಾದ್ಯದಲ್ಲಿ ನಾಗರಾಜು ಸಾಥ್‌ ನೀಡಿದರು.

ಅಭಿನಂದನಾರ್ಹರು:

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಚಲನಚಿತ್ರ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಮಾತನಾಡಿ, ‘‌ಇಂದಿನ ಆಧುನಿಕ ಯುಗದಲ್ಲಿ ಸಂಗೀತ, ನಾಟಕ ಹಾಗೂ ನಾಟ್ಯ ಎನ್ನುವುದು ನಿಂತು ಹೋಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ನಾಟಕ ಅಭಿನಯಿಸುತ್ತಿರುವುದು ದೊಡ್ಡ ಸಂಗತಿ. ಮಹಿಳೆಯರು ಮನೆಗಳಿಂದ ಹೊರ ಬಂದು ನಾಟಕ ಪ್ರದರ್ಶನಕ್ಕೆ ಅದರಲ್ಲೂ ಪಾರಾಣಿಕ ನಾಟಕ ಮಾಡುವುದಕ್ಕೆ ಮುಂದಾಗಿರುವುದು ಮತ್ತು ಅವರಿಗೆ ಪ್ರೋತ್ಸಾಹ ನೀಡಿದ ಪುರುಷರೂ ಅಭಿನಂದನಾರ್ಹರು’ ಎಂದು ಹೇಳಿದರು.

‘ಜೀವನದಲ್ಲಿ ಸತ್ಯ, ಧರ್ಮ‌, ಸರಳತೆ ಹಾಗೂ ಭಕ್ತಿ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಎಲ್ಲ ಸಮಾಜದವರನ್ನೂ ಪ್ರೀತಿಯಿಂದ ಕಾಣಬೇಕು. ಬೇರೆ ಬೇರೆ ಸಮುದಾಯಗಳಲ್ಲಿ ಒಗ್ಗಟ್ಟಿದೆ; ನಾವು ಕೂಡ ಕಿತ್ತಾಡುವುದನ್ನು ಬಿಟ್ಟು ಒಗ್ಗಟ್ಟಾಗಬೇಕು. ಶಸ್ತ್ರ–ಶಾಸ್ತ್ರದಲ್ಲಿ ಪರಿಣತಿ ಪಡೆದುಕೊಂಡು ದೇಶ ಸೇವೆಗೆ ಮುಂದಾಗಬೇಕು’ ಎಂದು ತಿಳಿಸಿದರು.

ಹೆಮ್ಮೆಯ ಸಂಗತಿ:

ಸಾನ್ನಿಧ್ಯ ವಹಿಸಿದ್ದ ಮೇಲುಕೋಟೆಯ ವೆಂಗಿಪುರ ನಂಬಿಮಠದ ಬಿ.ವಿ. ಇಳೈ ಆಳ್ವಾರ್ ಸ್ವಾಮೀಜಿ, ‘ಅಪಾರ ಜನರ ಸಮ್ಮುಖದಲ್ಲಿ ಮಹಿಳೆಯರು ನಾಟಕ ಪ್ರದರ್ಶನಕ್ಕೆ ಮನಸ್ಸು ಮಾಡಿದ್ದೇ ಹೆಮ್ಮೆಯ ಸಂಗತಿ. ಇಂತಹ ರಚನಾತ್ಮಕ ಚಟುವಟಿಕೆಗಳು ನಡೆಯುತ್ತಿರಬೇಕು’ ಎಂದರು.

ವೈಷ್ಣವ ಸಮಾಜದ ಸಾಧಕರಾದ ಲೇಖಕ ಕೆ.ರಮೇಶನ್, ಪತ್ರಕರ್ತ ರಂಗನಾಥ್, ಚಲನಚಿತ್ರ ನಟಿ ಅಮೃತಾ ಅಯ್ಯಂಗಾರ್, ಧಾರ್ಮಿಕ‌ ದತ್ತಿ ತಹಶೀಲ್ದಾರ್ ವಿದ್ಯುಲ್ಲತಾ, ವೈದ್ಯೆ ಡಾ.ಪಿ.ಸ್ನೇಹಾ, ಉಪ‌ತಹಶೀಲ್ದಾರರಾದ ವೇಣುಗೋಪಾಲ್, ಕೃಪಾಕರ, ಶ್ರೀನಿವಾಸ್, ಬಿಜೆಪಿ ಮುಖಂಡ ಓಂ ಶ್ರೀನಿವಾಸನ್‌, ಪ್ರಾಂಶುಪಾಲ ಎನ್. ಸ್ವಾಮಿನಾಥನ್, ಪ್ರಗತಿಪರ ಕೃಷಿಕ ಗೋಪಾಲ್, ಡಾ.ಪೂರ್ಣಿಮಾ‌ ಮಧುಸೂದನ್, ಯೋಗ ಗುರು ಡಾ.ಬಿ.ಶ್ರೀನಾಥ್ ಹಾಗೂ ವಿದುಷಿ ವಾರಿಜಾ ನಳಿಗೆ, ಜಲವಾಸುದೇವ ನಾಟಕ ಸಭಾದ ಸೂತ್ರಧಾರರಾದ ಎಸ್.ಎಲ್. ರಮಣ ಮತ್ತು ಕೆ.ಆರ್. ಕೃಷ್ಣ ಅವರನ್ನು ಸತ್ಕರಿಸಲಾಯಿತು.

ಜಲವಾಸುದೇವ ನಾಟಕ ಸಭಾದ ಪದಾಧಿಕಾರಿಗಳು, ನಂಜನಗೂಡು ವೈಷ್ಣವ ಸಭಾದ ಅಧ್ಯಕ್ಷ ಎಸ್.ನಾರಾಯಣ, ಮುಖಂಡರಾದ ಕೆ.ಮಧುಸೂಧನ, ಮೂ.ನ. ಲಿಂಗಣ್ಣಯ್ಯ, ಮಧು ಸುಬ್ಬಣ್ಣ, ಗ್ರಾಮ ಪಂಚಾಯಿತಿ ಸದಸ್ಯೆ ನಾಗು, ಮೈಮುಲ್ ನಿರ್ದೇಶಕಿ ನೀಲಾಂಬಕೆ, ಜಯಶ್ರೀ ನಾಗೇಂದ್ರ, ಪತ್ರಕರ್ತ ಕೆ.ಮಧುಸೂದನ್ ಪಾಲ್ಗೊಂಡಿದ್ದರು.

ಗೋಪಾಲಕೃಷ್ಣ ಪ್ರಾರ್ಥಿಸಿದರು. ಎಂ.ಎಸ್. ಸತ್ಯನಾರಾಯಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.