ADVERTISEMENT

2022ರ ದಸರೆಗೆ ಮುನ್ನವೇ ಮೈಸೂರು–ಬೆಂಗಳೂರು ದಶಪಥ ಹೆದ್ದಾರಿ ಸಿದ್ಧ

ಎಕ್ಸ್‌ಪ್ರೆಸ್‌ ವೇ ಇಕ್ಕೆಲಗಳಲ್ಲಿ ಆರಡಿ ಬೇಲಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 9:59 IST
Last Updated 18 ಆಗಸ್ಟ್ 2021, 9:59 IST
ಸಂಸದ ಪ್ರತಾಪಸಿಂಹ
ಸಂಸದ ಪ್ರತಾಪಸಿಂಹ   

ಮೈಸೂರು: ಬೆಂಗಳೂರು–ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿ 2022ರ ಸೆಪ್ಟೆಂಬರ್‌ನೊಳಗೆ ಮುಗಿಯಲಿದ್ದು, ಮುಖ್ಯ ಆರು ಪಥದ (ಎಕ್ಸ್‌ಪ್ರೆಸ್‌ ವೇ) ಉದ್ದಕ್ಕೂ ಇಕ್ಕೆಲಗಳಲ್ಲಿ ಆರಡಿ ಎತ್ತರದ ಚೈನ್‌ ಲಿಂಕ್‌ ಬೇಲಿ ನಿರ್ಮಿಸಲಾಗುತ್ತಿದೆ.

‘ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಪಟ್ಟಣದಲ್ಲಿ ಮಾತ್ರ ಆಗಮನ ಹಾಗೂ ನಿರ್ಗಮನ ದ್ವಾರ ಇರಲಿದ್ದು, ಉಳಿದೆಡೆ ಸಂಪೂರ್ಣವಾಗಿ ಚೈನ್‌ ಲಿಂಕ್‌ ಇರಲಿದೆ. ಜನ, ಜಾನುವಾರು ಪ್ರವೇಶಿಸಲು, ಮಧ್ಯದಲ್ಲಿ ವಾಹನಗಳು ಬೇರೆಡೆ ಹೋಗಲು ಸ್ಥಳಾವಕಾಶ ಇರುವುದಿಲ್ಲ. ಇದರಿಂದ ಅಪಘಾತ ತಪ್ಪಿಸಬಹುದಾಗಿದ್ದು, ಬೆಂಗಳೂರಿನಿಂದ ಮೈಸೂರಿಗೆ 90 ನಿಮಿಷಗಳಲ್ಲಿ ತಲುಪಬಹುದು. ಬಿಡದಿ ಹಾಗೂ ಗಣಂಗೂರು ಬಳಿ ಟೋಲ್‌ ಇರಲಿದೆ. ಎರಡು ಪಥದ ಸರ್ವೀಸ್‌ ರಸ್ತೆಯೂ ಇರಲಿದೆ’ ಎಂದು ಸಂಸದ ಪ್ರತಾಪಸಿಂಹ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘118 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಎರಡು ಕಡೆ ವಿಶ್ರಾಂತಿ ಪ್ರದೇಶ ನಿರ್ಮಿಸಲಾಗುತ್ತಿದೆ. ಸುಮಾರು 25 ಎಕರೆ ಪ್ರದೇಶದಲ್ಲಿ ಹೋಟೆಲ್‌, ಶೌಚಗೃಹ, ವಿಶ್ರಾಂತಿ ಕೊಠಡಿ, ಪೆಟ್ರೋಲ್‌ ಬಂಕ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಮುಕ್ತಾಯ ಹಂತ: ‘ಬೈಪಾಸ್‌ ಹಾಗೂ ಫ್ಲೈಓವರ್‌ ಸೇರಿ 60 ಕಿ.ಮೀ ಇದೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣಲ್ಲಿ ನಗರದಲ್ಲಿ ಬೈಪಾಸ್‌ ಇರಲಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದರು.

₹8,066 ಕೋಟಿಗೇರಿದ ವೆಚ್ಚ
‘ಮೈಸೂರು–ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿಯ ವೆಚ್ಚ ₹8,066 ಕೋಟಿಗೇರಿದೆ. ಇನ್ನೂ ₹500 ಕೋಟಿ ಹೆಚ್ಚಾಗಬಹುದು. ಆರಂಭದಲ್ಲಿ ಈ ಯೋಜನೆಗೆ ₹6,400 ಕೋಟಿ ನಿಗದಿಪಡಿಸಲಾಗಿತ್ತು’ ಎಂದು ಪ್ರತಾಪಸಿಂಹ ಹೇಳಿದರು.

‘ಸಮಗ್ರ ಯೋಜನಾ ವರದಿ ತಯಾರಿಸುವ ವೇಳೆ ಲೋಕೋಪಯೋಗಿ ಇಲಾಖೆಯು ಹಣ ಉಳಿತಾಯ ದೃಷ್ಟಿಯಿಂದ ಕೆಲವೆಡೆ ಸೇತುವೆ, ಮೇಲ್ಸೇತುವೆ ಯೋಜನೆ ಕೈಬಿಟ್ಟಿತ್ತು. ಆದರೆ, ನಂತರದ ದಿನಗಳಲ್ಲಿ ಸಮಸ್ಯೆ ಉಂಟಾಯಿತು‌’ ಎಂದರು.

‘ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ರಾಜ್ಯ ಸರ್ಕಾರದಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.