ADVERTISEMENT

ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ತೂಕ 5 ಟನ್‌!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 5:56 IST
Last Updated 6 ಸೆಪ್ಟೆಂಬರ್ 2023, 5:56 IST
<div class="paragraphs"><p>ಅಭಿಮನ್ಯು</p></div>

ಅಭಿಮನ್ಯು

   

ಮೈಸೂರು: ದಸರೆ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಅಭಿಮನ್ಯು ಆನೆ 5,160 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌’ನಲ್ಲಿ ಬುಧವಾರ ನಡೆದ ತೂಕ ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ 390 ಕೆ.ಜಿ ತೂಕ ಹೆಚ್ಚಿಸಿಕೊಂಡು ಇದೇ ಮೊದಲ ಬಾರಿ ಅತಿ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದ.

ADVERTISEMENT

ಗಜಪಡೆಯ ಹಿರಿಯ ಸದಸ್ಯ ಹಾಗೂ ಅತಿ ಹೆಚ್ಚು ತೂಕ ಹೊಂದಿರುವ ಬಲಾಢ್ಯ ‘ಅರ್ಜುನ’ನು ಹುಲಿ ಕಾರ್ಯಾಚರಣೆಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿಗೆ ತೆರಳಿದ್ದರಿಂದ, ‘ಅಭಿಮನ್ಯು’ ತೂಕದ ಆನೆ ಎಂಬ ಶ್ರೇಯಕ್ಕೆ ಪಾತ್ರನಾದನು.

ಕಳೆದ ವರ್ಷದ ತೂಕ ‍ಪರೀಕ್ಷೆಯಲ್ಲಿ ‘ಅಭಿಮನ್ಯು’ 4,770 ಕೆ.ಜಿ ಭಾರವಿದ್ದು, ಆಗ ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿತ್ತು. ಅರ್ಜುನ, ಗೋಪಾಲಸ್ವಾಮಿ, ಧನಂಜಯ ಮೊದಲ ಮೂರು ಸ್ಥಾನದಲ್ಲಿದ್ದರು. ಇವರಲ್ಲಿ ‘ಗೋಪಾಲಸ್ವಾಮಿ’ ಕಳೆದ ವರ್ಷ ಕಾಡಾನೆ ಕಾಳಗದಲ್ಲಿ ಮೃತಪಟ್ಟಿದ್ದಾನೆ. ಧನಂಜಯ ಈ ಬಾರಿಯ ದಸರೆಯಲ್ಲೂ ಭಾಗವಹಿಸಿದ್ದು, 4,940 ಕೆ.ಜಿ ಭಾರವಿದ್ದಾನೆ.

5,080 ಕೆ.ಜಿ ತೂಗಿದ ‘ಗೋಪಿ’ ಎರಡನೇ ಅತಿ ಹೆಚ್ಚು ತೂಕದ ಆನೆಯಾಗಿದ್ದಾನೆ. ಎರಡನೇ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ‘ಮಹೇಂದ್ರ’ 4,530, 3ನೇ ಬಾರಿ ಆಗಮಿಸಿರುವ ‘ಭೀಮ’ 4,370 ಕೆ.ಜಿ ಭಾರವಿದ್ದರು. ಹೊಸ ಸದಸ್ಯ ‘ಕಂಜನ್‌’ 4,240 ಕೆ.ಜಿ ತೂಗಿದ. ಹೆಣ್ಣಾನೆಗಳಲ್ಲಿ ‘ವಿಜಯಾ’ 2,830, ‘ವರಲಕ್ಷ್ಮಿ’ 3,020 ಕೆ.ಜಿ ತೂಕವಿದ್ದರು.

ನಿಗಾ ಇಡಲು ತೂಕ: ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆಗೆ ಮಾನದಂಡ ತಿಳಿದುಕೊಳ್ಳಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಅದರಂತೆ ತೂಕ ಪರೀಕ್ಷೆ ಪ್ರಕ್ರಿಯೆ ನಡೆದಿದೆ.

‘ಅರಮನೆ ಪ್ರವೇಶ ನಂತರ ಜಂಬೂಸವಾರಿ ತಾಲೀಮು ಆರಂಭಿಸುವ ಮುನ್ನ ಆನೆಗಳಿಗೆ ತೂಕ ಹಾಕಲಾಗುತ್ತದೆ. ವಿಶೇಷ ಆಹಾರಗಳನ್ನು ನೀಡಿದ ನಂತರ ಆನೆಗಳ ತೂಕ ಹೆಚ್ಚಾಗುತ್ತದೆ. ನಮಗೆ ಕೇವಲ ತೂಕ ಹೆಚ್ಚಾಗುವುದು ಮುಖ್ಯವಲ್ಲ. ಆನೆಗಳು ಆರೋಗ್ಯವಾಗಿರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಪರೀಕ್ಷೆ ನಡೆಸಲಾಗಿದೆ’ ಎಂದು ಡಿಸಿಎಫ್‌ ಸೌರಭ್‌ ಕುಮಾರ್‌ ಹೇಳಿದರು.

‘ತೂಕ ಪರೀಕ್ಷೆಯಿಂದ ಯಾವ ಆನೆಗಳಿಗೆ ಎಷ್ಟು ಆಹಾರ ನೀಡಬೇಕು ಎಂಬುದು ವೈದ್ಯರು ಸೂಚಿಸುತ್ತಾರೆ. 4 ಸಾವಿರ ಕೆ.ಜಿ ತೂಕವಿದ್ದರೆ 40 ಕೆ.ಜಿ ಪೌಷ್ಟಿಕ ಆಹಾರ ಕೊಡಲಾಗುತ್ತದೆ. 2ನೇ ತಂಡ ಆಗಮಿಸಿದ ನಂತರ, ಅರ್ಜುನ ಆನೆಗೂ ತೂಕ ಪರೀಕ್ಷೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

‘ಹುಲಿ ಸೆರೆ ಕಾರ್ಯಾಚರಣೆಗೆ ಅರ್ಜುನ ತೆರಳಿದ್ದು, ಒಂದೆರಡು ದಿನದಲ್ಲಿ ಗಜಪಡೆ ತಂಡವನ್ನು ಸೇರಲಿದ್ದಾನೆ. ಮಹೇಂದ್ರ ಆನೆಯನ್ನು ಕಾರ್ಯಾಚರಣೆಗೆ ಕಳುಹಿಸುವ ಆಲೋಚನೆಯಿತ್ತು. ಹೊಸ ಆನೆಗಳನ್ನು ನಿಯೋಜಿಸಿದ್ದರಿಂದ ಮೇಲಧಿಕಾರಿಗಳ ಸೂಚನೆಯಂತೆ ಇಲ್ಲಿಯೇ ಉಳಿಸಿಕೊಳ್ಳಲಾಯಿತು’ ಎಂದು ಮಾಹಿತಿ ನೀಡಿದರು.

‘ಅಭಿಮನ್ಯು ಇನ್ನೆರಡು ದಸರೆಗೆ ಅಂಬಾರಿ ಹೊರಲಿದ್ದು, ಭವಿಷ್ಯದ ಅಂಬಾರಿ ಆನೆಗಳ ತಯಾರಿಯನ್ನೂ ನಡೆಸಲಾಗುತ್ತದೆ’ ಎಂದರು.

‘ಎಲ್ಲ ಆನೆಗಳು ಒಳ್ಳೆಯ ತೂಕವನ್ನು ಹೊಂದಿದ್ದು, ಆರೋಗ್ಯವಾಗಿವೆ. ಈ ಬಾರಿ ನಾಲ್ಕು ‌ಹೆಣ್ಣಾನೆಗಳು ಬರಲಿವೆ. ಕಳೆದ ಬಾರಿ ಗರ್ಭಿಣಿ ಆನೆಯೊಂದನ್ನು ಗೊತ್ತಿಲ್ಲದೆ ತರಲಾಗಿತ್ತು. ಈ ಬಾರಿ ತಪ್ಪಾಗದಂತೆ ಎಚ್ಚರವಹಿಸಲಾಗಿದೆ. ಗರ್ಭ ಪರೀಕ್ಷೆಯನ್ನು ನಡೆಸಿ, ಖಚಿತಪಡಿಸಿಕೊಂಡ ನಂತರವೇ ಕರೆತರಲಾಗುತ್ತಿದೆ’ ಎಂದು ಪಶುವೈದ್ಯ ಮುಜೀಬ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭದ್ರತೆಯಲ್ಲಿ ನಡಿಗೆ: ಅರಮನೆಯಿಂದ ದಾಸ‍ಪ್ಪ ವೃತ್ತದ ಸಮೀಪದ ತೂಕ ಪರೀಕ್ಷಾ ಸ್ಥಳಕ್ಕೆ ಪೊಲೀಸ್‌ ಭದ್ರತೆಯಲ್ಲಿ ಆನೆಗಳು ಸಂಚರಿಸಿದವು. ‘ಜಂಬೂಸವಾರಿ’ ಸಂಚರಿಸುವ ಕೆ.ಆರ್‌.ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಹೆಜ್ಜೆಹಾಕಿದವು. ಗಜಪಡೆಯನ್ನು ನಗರದ ನಾಗರಿಕರು ಕಣ್ತುಂಬಿಕೊಂಡರು. ಹೂ ವ್ಯಾಪಾರಿಗಳು ಆನೆಗಳ ಮಾವುತರಿಗೆ ಹೂ–ಹಾರಗಳನ್ನು ಎಸೆದು ನಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.