ADVERTISEMENT

ಮೈಸೂರು| ಸಾವಯವ ಕೃಷಿಯ ಮಾರುಕಟ್ಟೆ ವಿಸ್ತರಣೆ: ಪ್ರೊ.ಸಿ.ಪಿ.ಗ್ರೇಸಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:56 IST
Last Updated 18 ಫೆಬ್ರುವರಿ 2026, 4:56 IST
<div class="paragraphs"><p>ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ಉದ್ಘಾಟಿಸಿದರು </p></div>

ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರ 

ಮೈಸೂರು: ‘ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಕೃಷಿಕರು ನಷ್ಟ ತಪ್ಪಿಸಲು ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಈ ಸುಸ್ಥಿರ ಕೃಷಿ ಪದ್ಧತಿ ಅನುಸರಿಸಬೇಕಿದೆ’ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರೊ.ಸಿ.ಪಿ.ಗ್ರೇಸಿ ಹೇಳಿದರು. 

ADVERTISEMENT

ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾವಯವ ಕೃಷಿ ಮತ್ತು ಕೃಷಿ ಮಾರುಕಟ್ಟೆಯಲ್ಲಿ ಹೊಸ ಪ್ರವೃತ್ತಿಗಳು ಹಾಗೂ ಗ್ರಾಮೀಣ ಅಭಿವೃದ್ಧಿಯ ಮೇಲೆ ಪರಿಣಾಮ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

‘ಬದಲಾದ ಜೀವನಶೈಲಿ ಒಡ್ಡಿದ ಆರೋಗ್ಯ ಸಮಸ್ಯೆಗಳು ಸಾವಯವ ಕೃಷಿ ಮಾರುಕಟ್ಟೆಯನ್ನು ವಿಸ್ತರಿಸಿದೆ. ಗ್ರಾಮೀಣ ಅಭಿವೃದ್ಧಿಗೆ ಅದು ನೆರವಾಗುತ್ತಿದೆ. ಕೃಷಿ ಆಧಾರಿತ ಕಿರು ಉದ್ಯಮಗಳ ಸ್ಥಾಪನೆಗೂ ಕಾರಣವಾಗುತ್ತಿದೆ. ಸಹಕಾರ ತತ್ವದಲ್ಲಿ ತೆರೆದ ಆಹಾರೋದ್ಯಮಗಳು ಗ್ರಾಮೀಣರಿಗೆ ಉದ್ಯೋಗವನ್ನೂ ಕೊಡುತ್ತಿವೆ’ ಎಂದರು. 

‘ಕೃಷಿ ಕ್ಷೇತ್ರವು ದೇಶದ ನಿವ್ವಳ ರಾಷ್ಟ್ರೀಯ ಆದಾಯಕ್ಕೆ ಶೇ 19.4ರಷ್ಟು ಕೊಡುಗೆ ನೀಡಿದೆ. ಒಂದೂವರೆ ದಶಕದ ಹಿಂದೆ ಶೇ 14.7ರಷ್ಟು ಪಾಲಿದ್ದ ಕೃಷಿ ವಲಯದ ಕೊಡುಗೆಯು ಶೇ 5ರಷ್ಟು ಹೆಚ್ಚಳ ಕಂಡಿದೆ. ಇದಕ್ಕೆ ಸಾವಯವ ಕೃಷಿ ಕಾರಣ’ ಎಂದು ಹೇಳಿದರು. 

‘ಕೃಷಿ ಕ್ಷೇತ್ರವು ದೇಶದ ಶೇ 46ರಷ್ಟು ಜನರಿಗೆ ಉದ್ಯೋಗ ನೀಡಿದೆ. ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಸೇವಾ ಕ್ಷೇತ್ರವು ವಿಸ್ತರಣೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ ಕೃಷಿ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ತಂತ್ರಜ್ಞಾನ ನೆರವಿನೊಂದಿಗೆ ಅನಗತ್ಯ ಪೋಲು ತಪ್ಪಿಸಬೇಕಿದೆ. ಕೃಷಿ ವಹಿವಾಟು ಲಾಭದಾಯಕವಾಗಿಸಲು ತೃತೀಯ ವಲಯದ ಸಹಾಯವೂ ಅಗತ್ಯವಾಗಿದೆ’ ಎಂದರು. 

‘ಗ್ರಾಮೀಣಾಭಿವೃದ್ಧಿ ಸಾಧ್ಯವಾಗಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ಮಾದರಿಯ ಕೃಷಿಯು ₹ 14 ಸಾವಿರ ಕೋಟಿ ಲಾಭ ತಂದುಕೊಟ್ಟಿದೆ. ಜಾಗತಿಕವಾಗಿ 22.23 ಕೋಟಿ ಎಕರೆಯಲ್ಲಿ ಸಾವಯವ ಕೃಷಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.  

ವಿಚಾರ ಸಂಕಿರಣ ಉದ್ಘಾಟಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌.ನಾಗರಾಜ, ‘ಸಹಕಾರಿ ತತ್ವದಲ್ಲಿ ಕೃಷಿ ಮಾಡಬೇಕು. ಕಬ್ಬು ಬೆಳೆಗೆ 10ರಿಂದ 12 ತಿಂಗಳು ಬೇಕಾಗುತ್ತದೆ. ವರ್ಷವಿಡೀ ನೀರು ಪೂರೈಕೆ ಇರಬೇಕು. ಆದರೆ, ಒಂದು ಕಬ್ಬಿನ ಜಲ್ಲೆಗೆ ₹ 2 ಮಾತ್ರ ಸಿಗುತ್ತದೆ. ಆದರೆ, ಕರಿಬೇವು, ಕೊತ್ತಂಬರಿ ಕಂತೆಗೆ ₹ 10 ಆಗುತ್ತದೆ. ಸಣ್ಣ ಹಿಡುವಳಿ ರೈತರು ಕಬ್ಬು ಬೆಳೆಯುವುದು ಲಾಭದಾಯಕವಲ್ಲ. ರೈತರು ಸುಸ್ಥಿರ ಮಾರ್ಗ ಅನುಸರಿಸಿ ಲಾಭದಾಯಕವಾಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಎಂ.ಚಂದ್ರಶೇಖರ್, ಪ್ರೊ.ಎಂ.ಮೀರಾ, ಪ್ರೊ.ಬಿ.ಎಲ್.ಚಿದಾನಂದ, ಪ್ರೊ.ಎಂ.ಎಸ್‌.ಗಣಪತಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.