ADVERTISEMENT

ನಂಜನಗೂಡು ರಸಬಾಳೆ ಕ್ಷೇತ್ರ ವಿಸ್ತರಣೆ

ಸರ್ಕಾರದ ಪ್ರೋತ್ಸಾಹ, ರೈತರ ಆಸಕ್ತಿ, ಗ್ರಾಹಕರಲ್ಲಿರುವ ಬೇಡಿಕೆ ಕಾರಣ

ಎಂ.ಮಹೇಶ್
Published 3 ಫೆಬ್ರುವರಿ 2026, 3:04 IST
Last Updated 3 ಫೆಬ್ರುವರಿ 2026, 3:04 IST
ಮೈಸೂರಿನ ದೇವರಾಜ ಮಾರುಕಟ್ಟೆಗೆ ತರಲಾಗಿದ್ದ ನಂಜನಗೂಡು ರಸಬಾಳೆ
ಮೈಸೂರಿನ ದೇವರಾಜ ಮಾರುಕಟ್ಟೆಗೆ ತರಲಾಗಿದ್ದ ನಂಜನಗೂಡು ರಸಬಾಳೆ   
30 ಹೆಕ್ಟೇರ್‌ನಿಂದ 85.30 ಹೆಕ್ಟೇರ್‌ಗೆ ವ್ಯಾಪಿಸಿದ ಬೆಳೆ | ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರ | ಅವಕಾಶಗಳ ಕುರಿತು ತರಬೇತಿ, ಮಾರ್ಗದರ್ಶನ

ಮೈಸೂರು: ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹ, ರೈತರ ಆಸಕ್ತಿ ಹಾಗೂ ಗ್ರಾಹಕರಲ್ಲಿ ಕಂಡುಬರುತ್ತಿರುವ ಬೇಡಿಕೆಯ ಕಾರಣದಿಂದಾಗಿ ಜಿಲ್ಲೆಯಲ್ಲಿ ‘ನಂಜನಗೂಡು ರಸಬಾಳೆ’ ಕ್ಷೇತ್ರ ವಿಸ್ತರಣೆಯಾಗುತ್ತಿದೆ. 2023ರಲ್ಲಿ 30 ಹೆಕ್ಟೇರ್‌ ಪ್ರದೇಶದಲ್ಲಿದ್ದ ಈ ಬೆಳೆಯು ಪ್ರಸ್ತುತ 85.30 ಹೆಕ್ಟೇರ್‌ಗೆ ವ್ಯಾಪಿಸಿದೆ. 

ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಹೆಸರಾಗಿ ‘ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್‌’ಗಳನ್ನು ಪಡೆದಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್‌ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು 2023–24ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ, ತೋಟಗಾರಿಕೆ ಇಲಾಖೆಯಿಂದ ಕ್ರಮ ವಹಿಸಿದ ಪರಿಣಾಮ ನಂಜನಗೂಡು ರಸಬಾಳೆ ಕ್ಷೇತ್ರ ಹೆಚ್ಚಾಗುತ್ತಿರುವುದು ಅಂಕಿ–ಅಂಶಗಳು ಹೇಳುತ್ತಿವೆ.

ಬಜೆಟ್‌ನಲ್ಲಿ ಹೇಳಲಾಗಿತ್ತು: ಬಜೆಟ್‌ನಲ್ಲಿ ಘೋಷಣೆ ನಂತರ ಉತ್ತೇಜನ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಪ್ರದೇಶ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ಇಲಾಖೆಯಿಂದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತಿದೆ. ಸಸ್ಯ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ರೈತರಿಗೆ ಮಾರ್ಗದರ್ಶನ ನೀಡುವ ಜೊತೆಗೆ ಪ್ರದೇಶದ ವಿಸ್ತರಣೆಗೂ ಯೋಜಿಸಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ADVERTISEMENT

‘ಜಿಐ ಟ್ಯಾಗ್’ ಪಡೆದಿರುವ ಬೆಳೆಗಳನ್ನು ಬೆಳೆಯುವವರಿಗೆ ಸಹಾಯಧನ ಸೌಲಭ್ಯವೂ ಸರ್ಕಾರದಿಂದ ದೊರೆಯುತ್ತಿದೆ. ಐದು ಎಕರೆವರೆಗೆ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಈ ಉತ್ಪನ್ನಗಳ ಬ್ರ್ಯಾಂಡಿಂಗ್‌ಗೂ ನೆರವು ಕಲ್ಪಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಗಮನಸೆಳೆದ ಎಂಎಲ್‌ಸಿ: 

ವಿಧಾನಪರಿಷತ್ ಸದಸ್ಯ ಮೈಸೂರಿನ ಕೆ.ಶಿವಕುಮಾರ್‌ ಅವರು ನಂಜನಗೂಡು ರಸಬಾಳೆ ಕೃಷಿಯ ಬಗ್ಗೆ ಗಮನಸೆಳೆಯುವ ಕೆಲಸವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಾಡಿದ್ದಾರೆ. ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಾಳೆ ಬೆಳೆಯ ವಿವರ ನೀಡಿದ್ದಾರೆ. ಕೃಷಿಕರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ 48,853 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗುತ್ತಿದೆ. ಗ್ರಾಂಡ್‌ 9 (ಜಿ9), ನೇಂದ್ರನ್, ಏಲಕ್ಕಿಬಾಳೆ, ನಂಜನಗೂಡು ರಸಬಾಳೆ, ಕಮಲಾಪುರ ಬಾಳೆ ಮೊದಲಾದ ತಳಿಗಳನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ನಂಜನಗೂಡು ತಾಲ್ಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೊಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ದೇವರಸನಹಳ್ಳಿ ಹಾಗೂ ಕೋಡಿನರಸೀಪುರ ಗ್ರಾಮಗಳಲ್ಲಿ ‘ನಂಜನಗೂಡು ರಸಬಾಳೆ’ಯನ್ನು ರೈತರು ಬೆಳೆಯುತ್ತಿದ್ದಾರೆ.

ನಂಜನಗೂಡು ರಸಬಾಳೆಗೆ ತೋಟಗಾರಿಕೆ ಇಲಾಖೆ ಉತ್ತೇಜನ ನೀಡುತ್ತಿದ್ದು ಅದನ್ನು ಇನ್ನೂ ಹೆಚ್ಚಿನ ರೈತರು ಬಳಸಿಕೊಳ್ಳಬೇಕು
ಮಂಜುನಾಥ್ ಅಂಗಡಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ನಂಜನಗೂಡು ರಸಬಾಳೆಯು ವಿಶಿಷ್ಟವಾದ ರುಚಿಯುಳ್ಳ ಕಾರಣದಿಂದಾಗಿ ಗ್ರಾಹಕರಿಂದ ಬೇಡಿಕೆ ಇದೆ
ಲಲಿತಾಂಬಾ ಹಣ್ಣಿನ ವ್ಯಾಪಾರಿ ಮಾಧವಚಾರ್‌ ವೃತ್ತ ಮೈಸೂರು

ಏನೇನು ಪ್ರೋತ್ಸಾಹ?

‘ಭೌಗೋಳಿಕ ಗುರುತು’ ಬೆಳೆಯಾದ ನಂಜನಗೂಡು ರಸಬಾಳೆ ಕೃಷಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಉತ್ತೇಜನ ನೀಡಲಾಗುತ್ತಿದೆ. ಈ ಬೆಳೆಯ ಸಂರಕ್ಷಣೆ ಪ್ರದೇಶದ ವಿಸ್ತರಣೆ ಹಾಗೂ ಉತ್ಪಾದನೆಗೆ ಉತ್ತೇಜನ ಕಾರ್ಯಕ್ರಮದಡಿ ಹನಿ ನೀರಾವರಿ ಸಹಿತ 0.20 ಹೆಕ್ಟೇರ್‌ ಪ್ರದೇಶಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ಶೇ 90ರಂತೆ ₹ 67312 ಹಾಗೂ ಇತರ ರೈತರಿಗೆ ಶೇ 75ರಷ್ಟು ಅಂದರೆ ₹ 56093 ಸಹಾಯನಧನ ಕೊಡಲಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ. 

ತರಬೇತಿ ಕಾರ್ಯಕ್ರಮ...

ಸುತ್ತೂರಿನ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕೆ ಕಾಲೇಜು ಹಾಗೂ ತಮಿಳುನಾಡಿ ತಿರುಚಿರಾಪಳ್ಳಿ (ತ್ರಿಚಿ)ಯಲ್ಲಿ ಬಾಳೆ ಬೆಳೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರದಿಂದ ನಂಜನಗೂಡು ರಸಬಾಳೆ ತಳಿಯ ಬೇಸಾಯದ ತಾಂತ್ರಿಕತೆ ಕುರಿತು 340 ರೈತರಿಗೆ ತರಬೇತಿ ನೀಡಲಾಗಿದೆ. ನಂಜನಗೂಡು ರಸಬಾಳೆ ತಳಿಯ ಪ್ರಾತ್ಯಕ್ಷಿಕೆ ತಾಕುಗಳನ್ನು ಜಿಲ್ಲೆಯ ಹುಣಸೂರು ತಾಲ್ಲೂಕಿನ ವಾರಂಚಿ ಮತ್ತು ಮೈಸೂರು ತಾಲ್ಲೂಕಿನ ಯಲಚಹಳ್ಳಿ ತೋಟಗಾರಿಕಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ಈ ತಾಕುಗಳಲ್ಲಿ ಕ್ಷೇತ್ರೋತ್ಸವವನ್ನು ಕೈಗೊಂಡು ಉತ್ತಮ ಬೇಸಾಯ ಪದ್ಧತಿಗಳನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮಾರ್ಗದರ್ಶನವನ್ನೂ ನೀಡಲಾಗುತ್ತಿದೆ. ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದಿಂದಲೂ ರೈತರಿಗೆ ಕ್ಷೇತ್ರಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇರುವ ಅವಕಾಶಗಳ ಕುರಿತು ತಿಳಿಕೊಡಲಾಗುತ್ತಿದೆ. ಈ ಭಾಗದಲ್ಲಿ ನಡೆಯುವ ವಿವಿಧ ಫಲ–ಪುಷ್ಪ ಪ್ರದರ್ಶನಗಳಲ್ಲಿ ನಂಜನಗೂಡು ರಸಬಾಳೆ ಪ್ರದರ್ಶನ ಆಯೋಜಿಸಿ ಬಳಕೆದಾರರಿಗೂ ಈ ಬೆಳೆಯ ಬಗ್ಗೆ ಆಸಕ್ತಿ ಮೂಡಿಸಿ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೆಲ್ಲವೂ ಈ ಬೆಳೆಯ ಕ್ಷೇತ್ರ ವಿಸ್ತರಣೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.