ADVERTISEMENT

ಸಾ.ರಾ.ಮಹೇಶ್ ಒತ್ತಡಕ್ಕೆ ಖಂಡನೆ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 12:01 IST
Last Updated 27 ಮಾರ್ಚ್ 2019, 12:01 IST
ಸಚಿವ ಸಾ.ರಾ.ಮಹೇಶ್ ಕಾರು ತಡೆದ ಕಾನ್‌ಸ್ಟೆಬಲ್‌ ವೆಂಕಟೇಶ್ ಅವರ ಅಮಾನತು ಕ್ರಮ ಖಂಡಿಸಿ ವಕೀಲ ಪಡುವಾರಹಳ್ಳಿ ರಾಮಕೃಷ್ಣ ಮೈಸೂರಿನ ಜಿಲ್ಲಾ ನ್ಯಾಯಾಲಯದ ಮುಂದಿನ ಮಹಾತ್ಮ ಗಾಂಧೀಜಿ ಪುತ್ಥಳಿ ಮುಂದೆ ಬುಧವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ಸಚಿವ ಸಾ.ರಾ.ಮಹೇಶ್ ಕಾರು ತಡೆದ ಕಾನ್‌ಸ್ಟೆಬಲ್‌ ವೆಂಕಟೇಶ್ ಅವರ ಅಮಾನತು ಕ್ರಮ ಖಂಡಿಸಿ ವಕೀಲ ಪಡುವಾರಹಳ್ಳಿ ರಾಮಕೃಷ್ಣ ಮೈಸೂರಿನ ಜಿಲ್ಲಾ ನ್ಯಾಯಾಲಯದ ಮುಂದಿನ ಮಹಾತ್ಮ ಗಾಂಧೀಜಿ ಪುತ್ಥಳಿ ಮುಂದೆ ಬುಧವಾರ ಏಕಾಂಗಿ ಪ್ರತಿಭಟನೆ ನಡೆಸಿದರು.   

ಮೈಸೂರು: ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ತಡೆದರು ಎಂಬ ಕಾರಣಕ್ಕೆ ಹೆಡ್‌ಕಾನ್‌ಸ್ಟೆಬಲ್ ವೆಂಕಟೇಶ್ ಅವರನ್ನು ಅಮಾನತುಪಡಿಸಿರುವ ಕ್ರಮಕ್ಕೆ ನಗರದಲ್ಲಿ ಬುಧವಾರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್ ವಲಯದಲ್ಲಂತೂ ಈ ಘಟನೆ ದಿಗ್ಭ್ರಮೆಗೆ ಕಾರಣವಾಗಿದೆ. ಇನ್ನು ಮುಂದೆ ಹೇಗೆ ಕಾರ್ಯನಿರ್ವಹಿಸುವುದು ಎಂಬ ಪ್ರಶ್ನೆಯನ್ನು ಕಾನ್‌ಸ್ಟೆಬಲ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ.

ಅರ್ಧ ನಿಮಿಷ ಕಾರನ್ನು ತಡೆದು ಕಾರಿನೊಳಗೆ ಏನಿದೆ, ಯಾರಿದ್ದಾರೆ ಎಂದು ನೋಡಬಾರದು ಎಂದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ. ‘ನಮ್ಮ ನೈತಿಕ ಸ್ಥೈರ್ಯವನ್ನೇ ಈ ಘಟನೆ ಉಡುಗಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹಲವು ಸಾಮಾಜಿಕ ಕಾರ್ಯಕರ್ತರು ಸಚಿವರ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ. ವಕೀಲರಾಗಿರುವ ಪಡುವಾರಹಳ್ಳಿ ರಾಮಕೃಷ್ಣ ಅವರು ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

‘ಸಚಿವರ ಕಾರು ತಡೆದು ಕರ್ತವ್ಯ ಪಾಲಿಸಿದ ಪೊಲೀಸ್ ಕಾನ್‌ಸ್ಟೆಬಲ್ ಅಮಾನತ್ತುಪಡಿಸಿರುವುದು ಖಂಡನೀಯ’ ಎಂಬ ಫಲಕ ಹಿಡಿದು ಇವರು ಆಕ್ರೋಶ ವ್ಯಕ್ತಪಡಿಸಿದರು.

ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡ ವೆಂಕಟೇಶ್:ಈ ಮಧ್ಯೆ ತೀರಾ ಬೇಸರಕ್ಕೆ ಒಳಗಾಗಿರುವ ಕಾನ್‌ಸ್ಟೆಬಲ್ ವೆಂಕಟೇಶ್ ತಮ್ಮ ಮೊಬೈಲ್‌ನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಇವರನ್ನು ಸಂಪರ್ಕಿಸಿ ಸಮಾಧಾನ ಹೇಳಲು ಯತ್ನಿಸಿದ ಸಹೋದ್ಯೋಗಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ವೆಂಕಟೇಶ್ ಎಂದು ಅವರ ಸಹೋದ್ಯೋಗಿಯೊಬ್ಬರು ಹೇಳುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಪ್ರವೇಶಿಸುತ್ತಿದ್ದ ಸಚಿವ ಸಾ.ರಾ.ಮಹೇಶ್ ಅವರ ವಾಹನವನ್ನು ಅರ್ಧನಿಮಿಷಗಳಷ್ಟು ಕಾಲ ವೆಂಕಟೇಶ್ ತಡೆದಿದ್ದರು. ಕಾರಿನೊಳಗೆ ಯಾರಿದ್ದಾರೆ ಎಂದು ಖಚಿತಪಡಿಸಿಕೊಂಡು ಕಾರನ್ನು ಒಳಗೆ ಬಿಟ್ಟಿದ್ದರು. ಇದರಿಂದ ಮಹೇಶ್ ಬಹಿರಂಗವಾಗಿಯೇ ವೆಂಕಟೇಶ್ ವಿರುದ್ಧ ಹರಿಹಾಯ್ದಿದ್ದರು. ಇದಾದ ಒಂದೇ ದಿನಕ್ಕೆ ಪೊಲೀಸ್ ಇಲಾಖೆ ವೆಂಕಟೇಶ್ ಅವರನ್ನು ಅಮಾನತುಪಡಿಸಿತ್ತು.

ಇದೇ ಮೊದಲೇನಲ್ಲ:ಸಚಿವ ಸಾ.ರಾ.ಮಹೇಶ್ ಅವರಿಗೂ ಪೊಲೀಸರಿಗೂ ಜಟಾಪಟಿ ಇದೇ ಮೊದಲೇನಲ್ಲ. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಅವರ ಕ್ರಿಯಾಸಮಾಧಿ ವೀಕ್ಷಿಸಲು ಬಂದಾಗ ತಮ್ಮನ್ನು ತಡೆದ ಈ ಹಿಂದಿನ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರನ್ನು ಬಹಿರಂಗವಾಗಿಯೇ ನಿಂದಿಸಿದ್ದರು. ಇದರಿಂದ ನೊಂದ ದಿವ್ಯಾ ಅವರು ಕಣ್ಣೀರು ಹಾಕಿದ್ದ ವಿಡಿಯೊ ವಿವಾದ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.