ADVERTISEMENT

ಮೈಸೂರು | ಜವಳಿಗೆ ಬೆಂಬಲ ಬೆಲೆ: ಶಿಫಾರಸು

ಮೈಸೂರು ವಿವಿ ಸಿಎಸ್‌ಎಸ್‌ಐನಿಂದ ದೇವಾಂಗ ಕುಲಶಾಸ್ತ್ರೀಯ ಅಧ್ಯಯನ ವರದಿ

ಎಂ.ಮಹೇಶ
Published 31 ಜನವರಿ 2025, 7:55 IST
Last Updated 31 ಜನವರಿ 2025, 7:55 IST
ಕೈಮಗ್ಗ (ಸಂಗ್ರಹ ಚಿತ್ರ)
ಕೈಮಗ್ಗ (ಸಂಗ್ರಹ ಚಿತ್ರ)   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ (ಸಿಎಸ್‌ಎಸ್‌ಐ) ನಡೆಸಿದ ದೇವಾಂಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಕರಡು ವರದಿ ಸಿದ್ಧವಾಗಿದ್ದು, ಅಳಿವಿನಂಚಿನ ಮಗ್ಗಗಳಿಗೆ ಪ್ರೋತ್ಸಾಹ ನೀಡುವಂತೆ ಶಿಫಾರಸು ಮಾಡಲಾಗಿದೆ.

ಡಿ.ದೇವರಾಜು ಅರಸು ಸಂಶೋಧನಾ ಸಂಸ್ಥೆಯು ಪ್ರಾಯೋಜಿಸಿರುವ, ಕ್ಷೇತ್ರ ಭೇಟಿ ಒಳಗೊಂಡ ಮೂರು ವರ್ಷಗಳ ಈ ಅಧ್ಯಯನವು ನೇಕಾರಿಕೆಯನ್ನೇ ಅವಲಂಬಿಸಿರುವ ದೇವಾಂಗ ಸಮುದಾಯದ ಕುರಿತು ಹೊಸ ಬೆಳಕು ಚೆಲ್ಲಿದೆ. ಅವರನ್ನು ಮುಖ್ಯವಾಹಿನಿಗೆ ತರಬೇಕಾದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ಚರ್ಚಿಸಿದೆ. ಏನೇನು ಮಾಡಬೇಕು ಎಂಬ ತುರ್ತನ್ನು ಒತ್ತಿ ಹೇಳಲಾಗಿದೆ.

ಗುಣಾತ್ಮಕ ಜವಳಿಗಳಿಗೆ ಕಡ್ಡಾಯ ಬೆಂಬಲ ಬೆಲೆ ಜಾರಿಗೊಳಿಸುವುದು, ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತಾಗಲು ಮತ್ತು ಮಾರುಕಟ್ಟೆ ಶೋಷಣೆಯಿಂದ ರಕ್ಷಿಸಲು ನಿರ್ದಿಷ್ಟ ಕಾರ್ಯವಿಧಾನಗಳನ್ನು ಸಿದ್ಧಪಡಿಸುವುದು ಒಳಗೊಂಡ ಹೊಸ ಜವಳಿ ನೀತಿ–2025 ರೂಪಿಸುವಂತೆ ಶಿಫಾರಸು ಮಾಡಲಾಗಿದೆ. ಗುಜರಾತ್ ಮತ್ತು ತಮಿಳುನಾಡು ಮಾದರಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ. 

ADVERTISEMENT

₹6.25 ಲಕ್ಷ ಅನುದಾನ: ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ. ನಂಜುಂಡ, ಮಹದೇವಯ್ಯ ಮತ್ತು ಮಹಮ್ಮದ್ ಮುಸ್ತಾಫ ಅವರ ತಂಡ ಅಧ್ಯಯನ ನಡೆಸಿದ್ದು, ಅರಸು ಸಂಸ್ಥೆಯು ₹6.25 ಲಕ್ಷ ಅನುದಾನ ಒದಗಿಸಿತ್ತು. ಕರಡು ವರದಿಯನ್ನು ಸಂಸ್ಥೆಗೆ ಸಲ್ಲಿಸಲಾಗಿದ್ದು, ಅಂತಿಮ ವರದಿ ಮುದ್ರಣದ ಹಂತದಲ್ಲಿದೆ.

‘ದೇವಾಂಗ ಸಮುದಾಯದ ಶೇ 80ಕ್ಕಿಂತ ಹೆಚ್ಚಿನ ಜನ ಇಂದಿಗೂ ನೇಕಾರಿಕೆ ಅವಲಂಬಿಸಿದ್ದಾರೆ. ಕೋವಿಡ್ ನಂತರ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಗ್ರಾಮೀಣ ನೇಕಾರರು ಗುಳೆ ಹೊರಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ’ ಎಂದು ಡಿ.ಸಿ. ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಕಾರಣ?: ‘ಪವರ್‌ಲೂಮ್ಸ್ ಮತ್ತು ಹ್ಯಾಂಡ್‌ಲೂಮ್ಸ್ ನಡುವಿನ ಸಂಘರ್ಷ, ಸಹಕಾರ ಸಂಘಗಳ ವೈಫಲ್ಯಗಳು, ಯುವಕರಲ್ಲಿ ಆಸಕ್ತಿಯ ಕೊರತೆ, ಉದ್ಯೋಗ ಬದಲಾವಣೆ, ಹೊಸ ವಿನ್ಯಾಸಗಳ ಜಾರಿಯಲ್ಲಿ ವಿಳಂಬ ಧೋರಣೆ, ಮಜೂರಿ ಸಮಸ್ಯೆ, ಜವಳಿಯಲ್ಲಿ ಆಧುನಿಕ ತಂತ್ರಜ್ಞಾನದ ಕೊರತೆ, ಮಾರುಕಟ್ಟೆಯ ಸಮಸ್ಯೆ, ಮಧ್ಯವರ್ತಿಗಳ ಹಾವಳಿ, ಜಾಹೀರಾತು ಮತ್ತು ಪ್ರಚಾರದ ಕೊರತೆ, ಗಾರ್ಮೆಂಟ್ಸ್‌ ಕ್ಷೇತ್ರದಿಂದ ಸ್ಪರ್ಧೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಡಿಜಿಟಲ್ ತಂತ್ರಜ್ಞಾನದಲ್ಲಿ ಹಿಂದುಳಿದಿರುವುದು ಮೊದಲಾದ ಸಮಸ್ಯೆಗಳನ್ನು ನೇಕಾರರು ಅನುಭವಿಸುತ್ತಿದ್ದಾರೆ. ಹೆಚ್ಚಿನ ನೇಕಾರರು ಅಸಂಘಟಿತ ವಲಯದಲ್ಲಿದ್ದಾರೆ’ ಎಂದರು.

‘ದೇವಾಂಗದ ಉಪಜಾತಿಯಾದ ‘ಕೋಷ್ಟಿ’ ಸಮುದಾಯವನ್ನು ಸೂಕ್ಷ್ಮ ಎಂದು ಪರಿಗಣಿಸುವಂತೆ ಹಾಗೂ ಉಪಜಾತಿಗಳಾದ ‘ವಿಂಕಾರ’ ಮತ್ತು ‘ಜುಲಹಾ’ ರಾಜ್ಯದಲ್ಲಿಲ್ಲದ ಕಾರಣ ದೇವಾಂಗ ಜಾತಿ ಪಟ್ಟಿಯಿಂದ ಕೈ ಬಿಡುವಂತೆ ಶಿಫಾರಸು ಮಾಡಿದ್ದೇವೆ. ವಿಶೇಷ ಆರ್ಥಿಕ ವಲಯಕ್ಕೆ ಹೆಚ್ಚಿನ ಬೆಂಬಲ ಅಗತ್ಯ. ಜವಳಿ ಟೆಕ್ ಪಾರ್ಕ್‌ಗಳಿಗೆ ಮೂಲಸೌಕರ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದ ಸಮುದಾಯ ಬೇರೆ ಉದ್ಯೋಗಗಳತ್ತ ಹೊರಳುತ್ತಿದೆ’ ಎಂದು ನಂಜುಂಡ ಹೇಳಿದರು.

ಡಿ.ಸಿ. ನಂಜುಂಡ
ಕೈಮಗ್ಗಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದ್ದು ಮಗ್ಗದ ಬಟ್ಟೆಗಳಿಗೆ ಗ್ರಾಹಕರು ಕಡಿಮೆಯಾಗುತ್ತಿದ್ದಾರೆ. ನೇಕಾರ ದೇವಾಂಗ ಕುಟುಂಬಗಳು ಬೀದಿಗೆ ಬೀಳುತ್ತಿವೆ
ಡಿ.ಸಿ. ನಂಜುಂಡ ಸಂಶೋಧಕ ಸಿ.ಎಸ್.ಎಸ್.ಐ ಮೈಸೂರು ವಿಶ್ವವಿದ್ಯಾಲಯ
ವರದಿಯ ಮುಖ್ಯಾಂಶಗಳು
ಶೇ 80ರಷ್ಟು ಕೈಮಗ್ಗಗಳು ಕಣ್ಮರೆ ರಾಜ್ಯದಾದ್ಯಂತ ಮೂರು ವರ್ಷಗಳ ಅಧ್ಯಯನ ಒಟ್ಟು 900 ಪುಟಗಳ ವರದಿ ಸಿದ್ಧ ಅಧ್ಯಯನದಿಂದ ಹೊಸ ಜವಳಿ ನೀತಿಗೆ ಪೂರಕ ಮಾಹಿತಿ ನೂರಕ್ಕಿಂತ ಹೆಚ್ಚು ಶಿಫಾರಸುಗಳ ಸಲ್ಲಿಕೆ ದೇವಾಂಗದ ಉಪಜಾತಿಗಳ ಬಗ್ಗೆ ಮೊದಲ ಬಾರಿಗೆ ಮಾಹಿತಿ
ಪ್ರಮುಖ ಶಿಫಾರಸುಗಳೇನು?
ನೇಕಾರರ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ₹1 ಸಾವಿರ ಕೋಟಿ ಅನುದಾನ ಒದಗಿಸಬೇಕು. ಡೈಯಿಂಗ್ ಪ್ರಿಂಟಿಂಗ್‌ಗೆ ಕಚ್ಚಾ ಪದಾರ್ಥಗಳು ಸುಲಭವಾಗಿ ಸಿಗುವಂತಾಗಬೇಕು. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಆಗಬೇಕು. ನೇಕಾರರಿಗೆ ನಿರಂತರ ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ನೇಕಾರ ಅಭಿವೃದ್ಧಿ ನಿಗಮದಿಂದ ಸರ್ಕಾರದ ವಿವಿಧ ಇಲಾಖೆಗಳಿಂದ ಬಟ್ಟೆ ಖರೀದಿಸಬೇಕು. ರಾಜ್ಯದಲ್ಲೂ ಕಪಡ ಮಾರ್ಕೆಟ್ ವ್ಯವಸ್ಥೆ ಜಾರಿಗೊಳಿಸಬೇಕು. ಕಾರ್ಯುಕ್ರಮಗಳ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.