ADVERTISEMENT

ಮೈಸೂರು | ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ: ಬೇಲದಕುಪ್ಪೆ ಪ್ರವಾಸಿತಾಣಕ್ಕೆ ಆಕ್ಷೇಪ

ವಾರದಲ್ಲಿ ಉಪಟಳ ನೀಡಿದ್ದ 2 ಹುಲಿ ಸೆರೆ

ಮೋಹನ್ ಕುಮಾರ ಸಿ.
Published 20 ಅಕ್ಟೋಬರ್ 2025, 7:11 IST
Last Updated 20 ಅಕ್ಟೋಬರ್ 2025, 7:11 IST
ಬೇಲದಕುಪ್ಪೆ ಮಹದೇಶ್ವರ ದೇವಾಲಯ 
ಬೇಲದಕುಪ್ಪೆ ಮಹದೇಶ್ವರ ದೇವಾಲಯ    

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಕಾಡಂಚಿನಲ್ಲಿ ಉಪಟಳ ನೀಡುತ್ತಿದ್ದ 2 ಹುಲಿಯನ್ನು ವಾರದೊಳಗೆ ಸೆರೆ ಹಿಡಿಯಲಾಗಿದೆ. ಈ ವೇಳೆ ಹುಲಿಗಳು ಸೆರೆಯಾದ ಗ್ರಾಮಗಳ ಸಮೀಪದಲ್ಲೇ ಇರುವ ‘ಬೇಲದಕುಪ್ಪೆ ಮಹದೇಶ್ವರ ದೇವಾಲಯ’ವನ್ನು ಪ್ರವಾಸಿ ತಾಣದ ಪಟ್ಟಿಯಿಂದ ಕೈಬಿಡಬೇಕೆಂಬ ಕೂಗು ಪರಿಸರವಾದಿಗಳು ಹಾಗೂ ನಾಗರಿಕರಿಂದ ವ್ಯಕ್ತವಾಗಿದೆ. 

ಸೆ.13ರಂದು ರಾಜ್ಯ ಸರ್ಕಾರವು 2024–29ನೇ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಜಿಲ್ಲಾವಾರು ಪ್ರವಾಸಿ ತಾಣಗಳಿಗೆ ಅನುಮೋದನೆ ನೀಡಿತ್ತು. ಅದರಲ್ಲಿ ಬೇಲದಕುಪ್ಪೆ ಮಹದೇಶ್ವರ ದೇವಾಲಯವೂ ಒಂದು.

‘ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಿರುವ ಈ ಭಾಗದಲ್ಲಿ ಪ್ರವಾಸಿ ತಾಣ ಮಾಡುವುದರಿಂದ ವನ್ಯಜೀವಿಗಳಿಗಷ್ಟೇ ಅಲ್ಲ, ಸ್ಥಳೀಯರಿಗೂ ತೊಂದರೆಯಾಗಲಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.  

ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ದೇವಾಲಯವು ಬರಲಿದ್ದು, ಸರಗೂರು ತಾಲ್ಲೂಕಿನ ಕಂದಲಿಕೆ ಹೋಬಳಿಯ ಅಳಲಹಳ್ಳಿ ಚೆಕ್‌ ಪೋಸ್ಟ್‌ನಿಂದ 6 ಕಿ.ಮೀ ಕಾಡಿನ ಒಳಗೆ ಇದೆ. ಉದ್ಭವ ಲಿಂಗವಿರುವ ದೇಗುಲ ದರ್ಶನಕ್ಕೆ ಭಕ್ತರು ವರ್ಷವಿಡೀ ಕಾಡಿನೊಳಕ್ಕೆ ಬರುತ್ತಾರೆ. ನವೆಂಬರ್‌– ಡಿಸೆಂಬರ್‌ ತಿಂಗಳ ಕಾರ್ತಿಕ ಮಾಸದಲ್ಲಿ ಜಾತ್ರೆಯೂ ನಡೆಯಲಿದ್ದು, ಅದನ್ನು ಅರಣ್ಯದ ಕೋರ್‌ ವಲಯದ ಹೊರಗಡೆ ಸ್ಥಳಾಂತರಿಸುವಂತೆ ಕಳೆದ ವರ್ಷವೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (‌ಎನ್‌ಟಿಸಿಎ) ಶಿಫಾರಸು ಮಾಡಿದೆ. 

ಎಚ್ಚರಿಕೆ ಘಂಟೆ: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನು ಜೋಡಿಸಿರುವ ಬಫರ್‌ ವಲಯವಿರುವ ಈ ಭಾಗದಲ್ಲಿ ಪ್ರವಾಸಿಗರ ಓಡಾಟದಿಂದ ವನ್ಯಜೀವಿಗಳಿಗೂ ತೊಂದರೆ ಆಗಲಿದೆ. ರೈತನ ಮೇಲೆ ದಾಳಿ ಮಾಡಿದ್ದ 3 ವರ್ಷದ ಹೆಣ್ಣು ಹುಲಿ ಹಾಗೂ ಜಾನುವಾರು ತಿನ್ನುತ್ತಿದ್ದ, ಹಲ್ಲು ಉದುರಿದ್ದ 12 ವರ್ಷದ ಹೆಣ್ಣು ಹುಲಿ ವಾರದ ಅಂತರದಲ್ಲಿಯೇ ಶಿವಪುರಮುಂಟಿ ಹಾಗೂ ಹೆಡಿಯಾಲ ಗ್ರಾಮಗಳಲ್ಲಿ ಸೆರೆಯಾಗಿರುವುದು ಎಚ್ಚರಿಕೆ ಘಂಟೆಯಾಗಿದೆ.

3 ವರ್ಷದ ಹುಲಿಯು ಬಡಗಲಪುರದ ರೈತ ಮಹದೇವ್‌ ಮೇಲೆ ದಾಳಿ ನಡೆಸಿತ್ತು. ಗಾಯಗೊಂಡಿದ್ದ ಅವರು ಎರಡು ಕಣ್ಣು ಕಳೆದುಕೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಇನ್ನೂ ಸಾವು– ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. 

ತೀವ್ರತೆ ಹೆಚ್ಚಳ: ‘ಸರಗೂರು ತಾಲ್ಲೂಕಿನ ಬಡಗಲಪುರ, ಬರಗಿ, ಅಳಲಹಳ್ಳಿ, ಬೇಗೂರು, ಯಶವಂತಪುರ, ಹೆತ್ತಿಗೆ, ಜಯಲಕ್ಷ್ಮೀಪುರ, ಶಿವಪುರ, ನಂಜನಗೂಡು ತಾಲ್ಲೂಕಿನ ಹಾದನೂರು, ಹೆಡಿಯಾಲ, ಅಮಕಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ– ಮಾನವ ಸಂಘರ್ಷ ದಶಕಗಳಿಂದಲೂ ನಡೆಯುತ್ತಿದೆ. ಈಚೆಗೆ ಅದರ ತೀವ್ರತೆ ಇನ್ನೂ ಹೆಚ್ಚಾಗಿದೆ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ. 

‘ಪ್ರವಾಸಿ ತಾಣ ಮಾನ್ಯತೆ ನೀಡಿರುವುದರಿಂದ ಅಭಿವೃದ್ಧಿ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಅವಕಾಶ ನೀಡಿದ್ದಲ್ಲಿ ವನ್ಯಜೀವಿಗಳ ಮುಕ್ತ ಓಡಾಟಕ್ಕೆ ತೀವ್ರ ತೊಂದರೆ ಆಗಿ ಮಾನವ– ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ. ಇದನ್ನು ಅರಿತು ಪ್ರವಾಸೋದ್ಯಮ ಯೋಜನೆ ಕೈ ಬಿಡಬೇಕು’ ಎನ್ನುತ್ತಾರೆ ಪರಿಸರ ಹೋರಾಟಗಾರ ಗಿರಿಧರ ಕುಲಕರ್ಣಿ. 

‘ಬಂಡೀಪುರ ಹಾಗೂ ನಾಗರಹೊಳೆ ವನ್ಯಜೀವಿ ಪ್ರದೇಶಗಳಲ್ಲಿ ಹುಲಿ ಸಂತತಿ ಹೆಚ್ಚಾಗಿದ್ದು, ವಯಸ್ಸಾದ ಹಾಗೂ ಗಾಯಾಳು ಹುಲಿಗಳು ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಬಫರ್ ವಲಯ ಹಾಗೂ ಕಾಡಂಚಿಗೂ ಬರುತ್ತಿವೆ. ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ’ ಎಂದರು.   

ಪ್ರವಾಸಿ ತಾಣ ಮಾನ್ಯತೆ ಬಗ್ಗೆ ‍ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. 

ಎನ್‌ಟಿಸಿಎ ಹೇಳುವುದೇನು? 

* ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ವಲಯದಲ್ಲಿರುವ ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿರುವುದು ಅರಣ್ಯ ವನ್ಯಜೀವಿ ಸಂರಕ್ಷಣಾ ಕಾನೂನು ಎನ್‌ಟಿಸಿಎ ನಿಯಮಗಳಿಗೆ ವಿರುದ್ಧವಾಗಿದೆ.

* ಹುಲಿಗಳ ಆವಾಸ ಸ್ಥಾನದಲ್ಲಿರುವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕೋರ್‌ ವಲಯದ ಹೊರಗಡೆಗೆ ಸ್ಥಳಾಂತರಿಸಬೇಕು.

* ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ವಲಯದಲ್ಲಿ ದೇಗುಲವಿದ್ದು ಜಾತ್ರೆಯು ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ.

* ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವುಗಳಲ್ಲಿ ಗರ್ಭ ಧರಿಸಿದ ಹಾಗೂ ತಾಯಿ ಹುಲಿಗಳೂ ಇವೆ. ಜಾತ್ರೆಯಿಂದ ದೇವಾಲಯದ ಆವರಣದಲ್ಲಿನ ಅರಣ್ಯ ಹಾಗೂ ಹುಲ್ಲುಗಾವಲು ಅನೈರ್ಮಲ್ಯವಾಗುತ್ತಿದೆ.

ಬೇಲದಕುಪ್ಪೆ ಮಹದೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಿರುವುದೇ ಕಾನೂನು ಬಾಹಿರ. ಈಗ ಅದನ್ನು ಪ್ರವಾಸಿತಾಣ ಆಗಿಸಿರುವುದು ಸರಿಯಲ್ಲ.
-ಗಿರಿಧರ ಕುಲಕರ್ಣಿ, ಪರಿಸರ ಹೋರಾಟಗಾರ
ಪ್ರವಾಸಿತಾಣ ಮಾಡುವುದರಿಂದ ರೆಸಾರ್ಟ್‌ಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಯ ಜೊತೆಗೆ ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಾಗಿದೆ
-ಬಡಗಲ‍ಪುರ ನಾಗೇಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.