ADVERTISEMENT

ಕಾನೂನು ಸುವ್ಯವಸ್ಥೆ | ಕಾಳಜಿ ತೋರದ ಮುಖ್ಯಮಂತ್ರಿ: ಸಂಸದ ಯದುವೀರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:19 IST
Last Updated 11 ಅಕ್ಟೋಬರ್ 2025, 4:19 IST
ಯದುವೀರ್ ಒಡೆಯರ್ 
ಯದುವೀರ್ ಒಡೆಯರ್    

ಮೈಸೂರು: ‘ನಗರದಲ್ಲಿ ಸರಣಿ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ವೇಳೆ ಮಾತ್ರ ತವರು ಜಿಲ್ಲೆ ಎನ್ನುತ್ತಾರಷ್ಟೇ. ಕಾಳಜಿ ತೋರುತ್ತಿಲ್ಲ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಸರಾ ವೇಳೆ ವ್ಯಾಪಾರ ಮಾಡಲು ವಲಸೆ ಕುಟುಂಬಗಳು ನಗರದಲ್ಲಿ ನೆಲೆಸುತ್ತವೆ. ಅವರಿಗೆ ಸೂಕ್ತ ರಕ್ಷಣೆ ಇಲ್ಲ. ಅವರೆಲ್ಲ ಎಲ್ಲಿ ಉಳಿದುಕೊಳ್ಳುತ್ತಾರೆ ಎಂಬ ಮಾಹಿತಿಯೊಂದಿಗೆ ಗಸ್ತು ಹೆಚ್ಚಿಸಬೇಕಾದ್ದು ಪೊಲೀಸರ ಜವಾಬ್ದಾರಿಯಲ್ಲವೇ’ ಎಂದು ಪ್ರಶ್ನಿಸಿದರು. 

‘ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವುದು ಅತ್ಯಂತ ಹೇಯ ಪ್ರಕರಣವಾಗಿದ್ದು, ರಾಜ್ಯದಲ್ಲಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ’ ಎಂದರು. 

ADVERTISEMENT

ಪಾಲಿಕೆ ಚುನಾವಣೆ ನಡೆಸಿ: ‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದ್ದರಿಂದ 15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಂದಿದ್ದ ₹ 70 ಕೋಟಿ ವಾಪಸ್‌ ಹೋಗಿದೆ. ಕೂಡಲೇ ಪಾಲಿಕೆ ಚುನಾವಣೆ ನಡೆಸಬೇಕು’ ಎಂದು ಯದುವೀರ್ ಒತ್ತಾಯಿಸಿದರು. 

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘50:50 ನಿವೇಶನ ಹಂಚಿಕೆ ಹಗರಣದಲ್ಲಿ ಭಾಗಿ ಆಗಿರುವ ಮಾಜಿ ಆಯುಕ್ತ ದಿನೇಶ್‌ ಕುಮಾರ್ ಅವರಂತೆಯೇ ನಟೇಶ್‌ ಅವರನ್ನೂ ಜಾರಿ ನಿರ್ದೇಶನಾಲಯ ಬಂಧಿಸಬೇಕು. ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಫಲಕವನ್ನು ಕಚೇರಿಯಲ್ಲಿ ಬದಲಿಸಲಿ’ ಎಂದರು. 

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ, ಮಾಜಿ ಮೇಯರ್ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಮುಖಂಡರಾದ ಮಹೇಶ್ ಕೇಬಲ್, ಮಹೇಶ್ ರಾಜೇ ಅರಸ್, ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.  

‘ಕಾಂಗ್ರೆಸ್ ಕುಟುಂಬಸ್ಥರ ದಸರಾ’ 

‘ದಸರಾ ಮಹೋತ್ಸವವು ಕಾಂಗ್ರೆಸ್ಸಿನ ಕೆಲ ರಾಜಕಾರಣಿಗಳು ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿತ್ತು’ ಎಂದು  ಯದುವೀರ್ ದೂರಿದರು. ‘ವಿಜಯದಶಮಿಯಂದು ಸಾವಿರಾರು ಜನರ ಬಳಿ ಗೋಲ್ಡ್‌ಕಾರ್ಡ್ ಪಾಸ್ ಇದ್ದರೂ ಅರಮನೆಯೊಳಗೆ ಬಿಡಲಿಲ್ಲ. ಪಾಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಎಷ್ಟು ಟಿಕೆಟ್ ಮುದ್ರಿಸಿದ್ದೇವೆ ಯಾರಿಗೆ ಎಷ್ಟು ಕೊಟ್ಟಿದ್ದೇವೆ ಎಂಬುದನ್ನು ಹೇಳಲಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.