ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆರಂಭವಾದ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿದರು.
ರಾಯಚೂರು: ‘ಇಡೀ ಪ್ರಪಂಚದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳ ಗತಿ ವೇಗವಾಗಿದೆ. ಈ ದಿಶೆಯಲ್ಲಿ ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆಯು ಪೂರಕವಾಗಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆರಂಭವಾದ ಕನ್ನಡದಲ್ಲಿ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಸರಿಯಾಗಿ ಮನದಟ್ಟು ಮಾಡಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅನೇಕ ಕಾರ್ಯಕ್ರಮ ರೂಪಿಸಿ ಜನಪಯುಕ್ತ ಕೆಲಸ ಮಾಡುತ್ತಿದೆ’ ಎಂದರು.
‘ತುಂಗಭದ್ರಾ ಡ್ಯಾಂನ 92 ಟಿಎಂಸಿ ಪ್ರಮಾಣದ ಬಹುತೇಕ ನೀರು ರಾಯಚೂರು ಜಿಲ್ಲೆಯಲ್ಲಿ 6 ಲಕ್ಷ ಎಕರೆ ಭೂಮಿಗೆ ಹರಿಯುತ್ತಿದೆ. ಈ ಭಾಗದಲ್ಲಿ ನೀರಾವರಿ ಪ್ರದೇಶ ಇನ್ನಷ್ಟು ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಪ್ರದೇಶದಲ್ಲಿನ ರೈತರು ತಮ್ಮ ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.
ಸಂಸದ ಜಿ. ಕುಮಾರ ನಾಯಕ ಮಾತನಾಡಿ, ‘ಕೃಷಿ ವಿಜ್ಞಾನವು ಈ ಹೊತ್ತಿನ ಅತ್ಯಂತ ಅಗತ್ಯ ಅಧ್ಯಯನದ ವಿಷಯವಾಗಿದೆ. ಕೇಂದ್ರ ಸರ್ಕಾರ ಇದೀಗ ಮೆಣಸಿನಕಾಯಿಗೂ ಬೆಂಬಲ ಬೆಲೆ ಘೋಷಣೆ ಮಾಡಿದೆ’ ಎಂದರು.
ಇದೇ ಸಂದರ್ಭದಲ್ಲಿ ಸಂಸದರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ರಾಜಾಸಾಬ ಎ.ಎಚ್., ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಿ. ಮಲ್ಲಿಕಾರ್ಜುನ, ತಿಮ್ಮಣ್ಣ ಸೋಮಪ್ಪ ಚಾವಡಿ, ಕುಲಸಚಿವರು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯ ಕಾರ್ಯದರ್ಶಿ ಶರಣಬಸಪ್ಪ ಕೋಟೆಪ್ಪಗೋಳ, ಡೀನ್ ಡಾ.ಕೆ.ನಾರಾಯಣರಾವ್, ವಿಶ್ರಾಂತ ಕುಲಪತಿ ಡಾ.ಎಂ.ಕೆ.ನಾಯಕ, ಲೇಖಕಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ, ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಅಯ್ಯನಗೌಡರ ಉಪಸ್ಥಿತರಿದ್ದರು.
ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಜಿ.ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಿಇಒ ಡಾ.ಆನಂದ ಆರ್ ಸ್ವಾಗತಿಸಿದರು. ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾ ಟಿ.ಸಿ ನಿರೂಪಿಸಿದರು. ಶರಣಗೌಡ ಹಿರೇಗೌಡರ ವಂದಿಸಿದರು.
ಕೃಷಿಕರು ಎದುರಿಸುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದ್ದು ರೈತರನ್ನು ಕಡೆಗಣಿಸಿದರೆ ನಾವೆಲ್ಲ ದುಸ್ಥಿತಿಗೆ ತಲುಪುತ್ತೇವೆ. ಆಹಾರ ಭದ್ರತೆಗೆ ಧಕ್ಕೆ ಬರಲಿದೆ.ಪ್ರೊ.ರಾಜಾಸಾಬ ಎ.ಎಚ್. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.