ದೇವದುರ್ಗ: ಪಟ್ಟಣದ ಮದ್ಯ ಮಾರಾಟ ಅಂಗಡಿ ಮಾಲೀಕರು ಅಬಕಾರಿ ನಿಯಮ ಗಾಳಿಗೆ ತೂರಿ ದುಬಾರಿ ಬೆಲೆಗೆ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿಬರುತ್ತಿದೆ.
ಪಟ್ಟಣದ ಹೊಸ ಬಸ್ ನಿಲ್ದಾಣ ಎದುರುಗಡೆಯ ಬಿಜೆಪಿಯ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ತಾಯಿ ಒಡೆತನದ ಭಾಗ್ಯವಂತಿ ವೈನ್ಸ್ (ಸಿಎಲ್ 2) ಮತ್ತು ಹಜರತ್ ಜೈಹಿರುದ್ದೀನ್ ಪಾಷ ಸರ್ಕಲ್ ಹತ್ತಿರದ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆ ಅಧ್ಯಕ್ಷೆ ಶಾಂತಮ್ಮ ಪುತ್ರ ಬಸವರಾಜ ಒಡೆತನದ ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್ ಮದ್ಯದ ಅಂಗಡಿ ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ತೆರೆದು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿವೆ. ಜಿಪಿಎಸ್ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮಾರಾಟ) 1968ರ ಪ್ರಕಾರ ಸಿಎಲ್ 2 ಸನ್ನದು ಮದ್ಯ ಮಾರಾಟ ಅವಧಿ ಬೆಳಿಗ್ಗೆ 10ರಿಂದ ರಾತ್ರಿ 10.30 ಗಂಟೆ ಮತ್ತು ಸಿಎಲ್ 9 ಅಂಗಡಿಗೆ ಬೆಳಿಗ್ಗೆ 10ರಿಂದ ರಾತ್ರಿ 11.30 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಬೇಕು. ಆದರೆ, ಮದ್ಯ ಅಂಗಡಿ ಮಾಲೀಕರು ಅಬಕಾರಿ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಶನಿವಾರ ದೇವದುರ್ಗದ ವಾರದ ಸಂತೆ ಹಿನ್ನೆಲೆ ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಜಾನುವಾರು ವ್ಯಾಪಾರಕ್ಕೆ ಬರುವ ರೈತರೇ ಇವರ ಗುರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರತಿದಿನ ಸರಿಯಾದ ಸಮಯಕ್ಕೆ ತೆರೆಯುತ್ತೇವೆ. ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಕೆಲಸಗಾರರು ಶನಿವಾರ ಈ ರೀತಿ ಮಾಡಿದ್ದಾರೆ’ ಎಂದು ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ಬಸವರಾಜ ಪ್ರತಿಕ್ರಿಯಿಸಿದರು.
ಭಾಗ್ಯವಂತಿ ವೈನ್ಸ್ ಮಾಲೀಕರಾದ ಮಹದೇವಮ್ಮ ಅವರು, ‘ವೈನ್ಸ್ ವ್ಯವಹಾರ ನಮ್ಮ ಮಗ ನಾಗರಾಜ ನೋಡಿಕೊಳ್ಳುತ್ತಾರೆ. ನನಗೆ ಮಾಹಿತಿ ಇಲ್ಲ’ ಎಂದು ತಿಳಿಸಿದರು.
ಮಾನ್ವಿ ತಾಲ್ಲೂಕಿನ ಅಬಕಾರಿ ಇಲಾಖೆಯ ವೃತ ನಿರೀಕ್ಷಕ ಯಮನೂರ್ ಸಾಬ್ ಅವರು, ‘ಸಾರ್ವಜನಿಕರು ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಬಕಾರಿ ಪಿಎಸ್ಐ ಮತ್ತು ಸಿಪಿಐ ಮದ್ಯದ ಅಂಗಡಿ ಮಾಲೀಕರ ರಕ್ಷಣೆಗೆ ನಿಂತಿದ್ದಾರೆ. ಅವರಿಗೆ ಪ್ರತಿ ತಿಂಗಳು ಮದ್ಯದ ಅಂಗಡಿಯಿಂದ ಮಾಮೂಲಿ ಹೋಗುತ್ತದೆ’ ಎಂದು ಬಸವರಾಜ ನಾಯಕ ಮಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ತಾಲ್ಲೂಕು ಕೇಂದ್ರ, ಪಟ್ಟಣಗಳಲ್ಲಿಯೇ ಈ ರೀತಿ ನಿಯಮ ಉಲ್ಲಂಘನೆ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹೇಳುತ್ತಿರದು. ಅಧಿಕಾರಿಗಳು ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರಿಗೆ ಸೇರಿದ ಭಾಗ್ಯವಂತಿ ವೈನ್ಸ್ ಮದ್ಯ ಅಂಗಡಿ ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದಲ್ಲಿ ಶಾಮೀಲಾಗಿದೆಬಸವರಾಜ ನಾಯಕ ಮಸ್ಕಿ ಅಧ್ಯಕ್ಷ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ
ಮದ್ಯದ ಅಂಗಡಿಗಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇವೆಯಮನೂರ್ ಸಾಬ್ ಅಬಕಾರಿ ಇಲಾಖೆ ಮಾನ್ವಿ ವೃತ್ತ ನಿರೀಕ್ಷಕ
ಮದ್ಯ ಅಕ್ರಮ ಮಾರಾಟದ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬಡ ಮತ್ತು ಮಧ್ಯಮ ಕುಟುಂಬಗಳು ಹೆಚ್ಚು ಬಲಿಯಾಗಿವೆ. ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಿಕರೆಮ್ಮ ಜಿ.ನಾಯಕ ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.