ಮಾನ್ವಿ: ‘ಮುಸ್ಲಿಮರ ಈದ್ ಮಿಲಾದ್ ಹಬ್ಬವು ಶಾಂತಿ–ಸೌಹಾರ್ದದ ಸಂದೇಶ ನೀಡುವ ಹಬ್ಬವಾಗಿದೆ. ನಾವೆಲ್ಲರೂ ಜಾತಿ-ಮತ-ಧರ್ಮ ಬದಿಗಿಟ್ಟು ಹಬ್ಬಗಳನ್ನು ಒಗ್ಗೂಡಿ ಆಚರಿಸಬೇಕು’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಶುಕ್ರವಾರ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕ ಜಿ.ಹಂಪಯ್ಯ ನಾಯಕ , ಧರ್ಮಗುರು ಸೈಯದ್ ಸಜ್ಜಾದ್ ಹುಸೇನ್ ಮತವಾಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಸೈಯದ್ ಅಕ್ಬರ್ ಪಾಷಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ರಕ್ತದಾನ ಶಿಬಿರ: ಈದ್ ಮಿಲಾದ್ ಪ್ರಯುಕ್ತ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮುಸ್ಲಿಂ ನೌಜವಾನ್ ಕಮಿಟಿ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನೂರಾರು ಯುವಕರು ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಮುಖಂಡರಾದ ಮಿರ್ಜಾ ಆದಮ್ ಬೇಗ್, ಮೊಹಮ್ಮದ್ ರಹಮತ್ ಅಲಿ, ಮೊಹಮ್ಮದ್ ಕಾಶಿಮ್ ಖುರೇಷಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.