ADVERTISEMENT

ವಸತಿ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ನೇರ ಪ್ರವೇಶ: ದಾಸ್ ಸೂರ್ಯವಂಶಿ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 7:01 IST
Last Updated 15 ಫೆಬ್ರುವರಿ 2025, 7:01 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ರಾಯಚೂರು: ‘ಮುಂದಿನ ದಿನಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಗಳಿಲ್ಲದೇ ನೇರವಾಗಿ ಪ್ರವೇಶ ಕಲ್ಪಿಸಲಾಗುವುದು’ ಎಂದು ಅಂಗವಿಕಲರ ಅಧಿನಿಯಮ ಅನುಷ್ಠಾನ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.

ADVERTISEMENT

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಏರ್ಪಡಿಸಿದ್ದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಅಧೀನದಲ್ಲಿರುವ ಸುಮಾರು 900 ವಸತಿ ಶಾಲೆಗಳಲ್ಲಿ ಶೇ25 ಅಂಗವಿಕಲತೆ ಹೊಂದಿದ ಮಕ್ಕಳಿಗೆ ಯಾವುದೇ ಪ್ರವೇಶಾತಿ ಪರೀಕ್ಷೆಗಳಿಲ್ಲದೇ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲು ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಂಗವಿಕಲರಿಗಾಗಿಯೇ ಇರುವ ಶೇ4 ರಿಂದ 5ರಷ್ಟು ಮೀಸಲಾತಿ ಇದ್ದು, ಅದರ ಪರಿಶೀಲನೆಗಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016 ಅನುಷ್ಠಾನಗೊಳಿಸುವಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ನೀಡಬೇಕಿದೆ ಎಂದು ತಿಳಿಸಿದರು.

ವಿಕಲಚೇತನರ ಸ್ನೇಹಿ ವಾತಾವಾರಣ ಸೃಷ್ಟಿಸಿ:

ವಿಕಲಚೇತನರಿಗೆ ಯಾವುದೇ ಅಭಿವೃದ್ಧಿ ಯೋಜನೆಗಳಲ್ಲಿ ವಂಚಿತರಾಗದಂತೆ ಕಡ್ಡಾಯವಾಗಿ ಶೇ.5ರಷ್ಟು ಮೀಸಲು ನಿಗದಿಪಡಿಸಿ ಫಲಾನುಭವಿಗಳನ್ನಾಗಿಸಬೇಕು. ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರ ಸ್ನೇಹಿ ವಾತಾವಾರಣ ಸೃಷ್ಟಿಸಬೇಕಿದೆ. ಆಯಾ ಸ್ಥಳಗಳಲ್ಲಿ ಅಂಗವಿಕಲರ ಓಡಾಟಕ್ಕೆ ಸುಲಭ ದಾರಿ, ವ್ಹೀಲ್‌ಚೇರ್ ವ್ಯವಸ್ಥೆ, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಆರೈಕೆದಾರರಿಗೆ ಮಾಸಾಶನ:

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ವಿಶೇಷ ಚೇತನರ ಆರೈಕೆದಾರರರಿಗೆ ಮಾಸಾಶನ ನೀಡಲು ಕ್ರಮ ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಅಂಗವಿಕಲರ ಆರೈಕೆ ಮಾಡುವ ಪಾಲಕರಿಗೆ ಪ್ರೋತ್ಸಾಹ ನೀಡಿದಂತಾಗಲಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗಧಿತ ಯ್ಯಾಪ್‌ಗಳನ್ನು ರಚಿಸಲಾಗಿದ್ದು, ಯ್ಯಾಪ್ ಮೂಲಕ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ.

ರಾಯಚೂರು ಜಿಲ್ಲೆ ಮಾದರಿ:

ರಾಯಚೂರು ಜಿಲ್ಲೆಯಲ್ಲಿ ಅಂಗವಿಕಲರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿರುವ ಹಿನ್ನಲೆಯಲ್ಲಿ ಇಡೀ ರಾಜ್ಯಕ್ಕೆ ರಾಯಚೂರು ಜಿಲ್ಲೆ ಮಾದರಿಯಾಗಿದೆ. ರಾಜ್ಯದಲ್ಲಿ 7 ಸಾವಿರ ಅಂಗವಿಕಲರು ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಯುಆರ್‌ಡಬ್ಲೂ, ಎಆರ್‌ಡಬ್ಲೂ, ಎಂಆರ್‌ಡಬ್ಲೂಗಳಾಗಿ ನೇಮಕ ಮಾಡಿ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

50 ಲಕ್ಷದವರೆಗೆ ಸಾಲಸೌಲಭ್ಯ:

ದೇಶದಲ್ಲೇ ಕರ್ನಾಟಕ ರಾಜ್ಯ ಅಂಗವಿಕಲರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮಾದರಿಯಾಗಿದೆ. ರಾಷ್ಟ್ರೀಯ ಅಂಗವಿಕಲರ ಅಭಿವೃದ್ಧಿ ಹಣಕಾಸು ಸಂಸ್ಥೆಯ ಮೂಲಕ ಪ್ರತಿ ವರ್ಷ ರಾಜ್ಯಕ್ಕೆ ₹100 ಕೋಟಿ ಅನುದಾನ ತರಬಹುದಾಗಿದ್ದು, ಅಂಗವಿಕಲರಿಗೆ ₹50 ಲಕ್ಷದವರೆಗೆ ಸಾಲಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. 

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ ಕುಮಾರ, ಜಿಲ್ಲಾ ಅಂಗವಿಲಕರ ಕಲ್ಯಾಣಾಧಿಕಾರಿ ಶ್ರೀದೇವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.