ADVERTISEMENT

ಮಾನ್ವಿ: ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಕೆ

ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 6:23 IST
Last Updated 5 ಜೂನ್ 2023, 6:23 IST
ಸೋಲಾರ್ ಎಲೆಕ್ಟ್ರಿಕ್ ವಾಹನದ ಜತೆಗೆ  ಮಾನ್ವಿಯ ಬಸವ ಐಟಿಐ ಕಾಲೇಜಿನ ಪ್ರಾಂಶುಪಾಲ ತಿಪ್ಪಣ್ಣ ಹೊಸಮನಿ ಮತ್ತು ವಿದ್ಯಾರ್ಥಿಗಳು
ಸೋಲಾರ್ ಎಲೆಕ್ಟ್ರಿಕ್ ವಾಹನದ ಜತೆಗೆ  ಮಾನ್ವಿಯ ಬಸವ ಐಟಿಐ ಕಾಲೇಜಿನ ಪ್ರಾಂಶುಪಾಲ ತಿಪ್ಪಣ್ಣ ಹೊಸಮನಿ ಮತ್ತು ವಿದ್ಯಾರ್ಥಿಗಳು   

ಬಸವರಾಜ ಭೋಗಾವತಿ

ಮಾನ್ವಿ: ಪಟ್ಟಣದ ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳು ಜೀಪ್ ಮಾದರಿಯಲ್ಲಿ ವಿನೂತನವಾದ ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಬಸವ ಐಟಿಐ ಕಾಲೇಜಿನ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ಅಂತಿಮ ವರ್ಷದ ಮೂರ್ತಿ ಶೇಷ ಚಾಗಬಾವಿ ಕ್ಯಾಂಪ್, ಸಿದ್ದಪ್ಪ ಮಾಡಗಿರಿ, ವಿ.ಎಸ್. ರುತಿನ್ ಬಲ್ಲಟಗಿ, ಅಶೋಕ ಹರವಿ, ಶ್ರೀನಿವಾಸ ಬಲ್ಲಟಗಿ ಇತರ 16 ಜನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಹಾಗೂ ಕಿರಿಯ ತರಬೇತಿ ಅಧಿಕಾರಿ ಶಿವಪುತ್ರ ಅವರ ಮಾರ್ಗದರ್ಶನದಲ್ಲಿ ಈ ವಾಹನ ಸಿದ್ಧಪಡಿಸಿದ್ದಾರೆ.

ADVERTISEMENT

ಎರಡು ಸೋಲಾರ್ ಪ್ಯಾನಲ್, 70 ಎಎಚ್ ಬ್ಯಾಟರಿ , 1 ಕಿಲೋವ್ಯಾಟ್ ಬಿಎಲ್‌ಡಿಸಿ ಮೋಟಾರ್ ಜತೆಗೆ ಕಂಟ್ರೋಲರ್, ಎಕ್ಸಲೇಟರ್, ಡಿಸ್ಕ್ ಬ್ರೇಕ್, ಬ್ಯಾಕ್ ವ್ಹೀಲ್ ಡಿಫರೆನ್ಷಿಯಲ್, ಹೆಡ್ ಲೈಟ್, ಇಂಡಿಕೇಟರ್‌ಗಳನ್ನು ಬಳಸಿ ನಾಲ್ಕು ಸೀಟುಗಳನ್ನು ಹೊಂದಿರುವ ಈ ವಾಹನ ತಯಾರಿಸಲಾಗಿದೆ. ಈ ವಾಹನವು ಪ್ರತಿ ಗಂಟೆಗೆ 35ರಿಂದ 40 ಕಿ.ಮೀ. ಚಲಿಸುವ ಸಾಮರ್ಥ್ಯ ಹೊಂದಿದೆ. ಈ ವಾಹನಕ್ಕೆ 5ರಿಂದ 6 ಕಿಲೋವ್ಯಾಟ್  ಸಾಮರ್ಥ್ಯದ ಮೋಟಾರ್ ಬಳಸಿದರೆ ಪ್ರತಿ ಗಂಟೆಗೆ 100ರಿಂದ 120 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂದು ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ಹೇಳುತ್ತಾರೆ.

ಪೆಟ್ರೋಲ್ ಅಥವಾ ಡೀಸೆಲ್ ಬಳಸದೆ ಸೌರಶಕ್ತಿಯ ಮೂಲಕ ಬಳಸಲ್ಪಡುವ ಈ ಸೋಲಾರ್ ಎಲೆಕ್ಟ್ರಿಕ್ ವಾಹನ ವಾಯು ಮಾಲಿನ್ಯ ತಡೆಗಟ್ಟಲು ಪೂರಕ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. ಹೊರನೋಟಕ್ಕೆ ಜೀಪಿನಂತೆ ಕಾಣುವ ಈ ವಾಹನದಲ್ಲಿ ವಿದ್ಯಾರ್ಥಿಗಳು ಮಾನ್ವಿ ಪಟ್ಟಣದಲ್ಲಿ ಸಂಚರಿಸುವ ಮೂಲಕ ಸ್ಥಳೀಯರ ಗಮನ ಸೆಳೆಯುತ್ತಿದ್ದಾರೆ.

ಕಳೆದ ವರ್ಷ ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೋಲಾರ್ ಇ-ಬೈಸಿಕಲ್  ತಯಾರಿಸಿ ಸಾಧನೆ ಮಾಡಿದ್ದರು. ಅಂತರರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಯುಎನ್‌ಡಿಪಿ ಸಂಸ್ಥೆ, ಪ್ರಾಜೆಕ್ಟ್ ಕೋಡ್ ಉನ್ನತಿ, ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಎಸ್‌ಎಪಿ ಲ್ಯಾಬ್ಸ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಹಾಗೂ ಕೌಶಲಾಭಿವೃದ್ಧಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಹೊಸ ಆವಿಷ್ಕಾರಗಳ ಸ್ಪರ್ಧೆಯಲ್ಲಿ ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳು ಆವಿಷ್ಕರಿಸಿದ ಸೋಲಾರ್ ಇ–ಬೈಸಿಕಲ್ ಬಗ್ಗೆ ತೀರ್ಪುಗಾರರಿಂದ ಪ್ರಶಂಸೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ₹ 1ಲಕ್ಷ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಿತ್ತು.

ಕಳೆದ ವರ್ಷ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸೋಲಾರ್ ಇ–ಬೈಸಿಕಲ್ ಆವಿಷ್ಕಾರದಿಂದ ಪ್ರೇರಣೆಗೊಂಡಿದ್ದ ಕಿರಿಯ ವಿದ್ಯಾರ್ಥಿಗಳು ಈ  ಬಾರಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿ ಹಾಗೂ ಪ್ರತಿಭೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾನ್ವಿಯ ಬಸವ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿರುವ ಸೋಲಾರ್ ಎಲೆಕ್ಟ್ರಿಕ್  ವಾಹನ 

ಸೋಲಾರ್ ಎಲೆಕ್ಟ್ರಿಕ್ ವಾಹನದ ವಿಶೇಷತೆ:

• ಸೋಲಾರ್ ಪ್ಯಾನಲ್‌ನಿಂದ ಸೊಲಾರ್ ಬಗ್ ಬೂಸ್ಟರ್ ಬಳಸಿ ನೇರವಾಗಿ ವಾಹನವನ್ನು ಚಲಾಯಿಸಬಹುದು. ಸೋಲಾರ್ ಚಾರ್ಚ್ ಮೂಲಕ ಬ್ಯಾಟರಿ ಚಾರ್ಜ್ ಮಾಡಿ ಅಥವಾ ಗ್ರಿಡ್ ಪವರ್‌ನಿಂದ ಬ್ಯಾಟರಿ ಚಾರ್ಚ್ ಮಾಡಿ ವಾಹನವನ್ನು ಚಲಾಯಿಸಬಹುದು.

• ಗೇರ್ ಸ್ವಿಚ್ ಅನ್ನು ಬಳಸಿಕೊಂಡು ವಾಹನವನ್ನು ಮುಮ್ಮುಖವಾಗಿ ಹಾಗೂ ಹಿಮ್ಮುಖವಾಗಿ ಚಲಿಸಬಹುದು.

• ವಾಹನದಲ್ಲಿ ಆ್ಯಂಪ್ಲಿಫಯರ್ ಮತ್ತು ಸ್ಪೀಕರ್ ಅಳವಡಿಸಲಾಗಿದೆ.

• ಒಟ್ಟು ವಾಹನದ ತೂಕ 350-400 ಕೆಜಿ ಇದೆ. ಸುಮಾರು 4ರಿಂದ 5 ಜನ ಇದರಲ್ಲಿ ಪ್ರಯಾಣ ಮಾಡಬಹುದಾಗಿದೆ.

• ವಾಹನ ತಯಾರಿಸಲು ಸ್ಥಳೀವಾಗಿ ಸಿಗುವಂತಹ ವಸ್ತುಗಳನ್ನು ಬಳಕೆ ಮಾಡಲಾಗಿದೆ (ಚಾಸ್ಸಿ ತಯಾರಿಸಲು 2 ಇಂಚು / 1 ಇಂಚಿನ ಚೌಕಾಕಾರದ ಪೈಪುಗಳನ್ನು ಹಾಗೂ 1.2 ಗೇಜ್ ಕಬ್ಬಿಣದ ಶೀಟ್ ಬಳಸಿ ವಿದ್ಯಾರ್ಥಿಗಳೇ ವೆಲ್ಡಿಂಗ್ ಮತ್ತು ಮೌಲ್ಡಿಂಗ್ ಮಾಡಿ ಒಟ್ಟು ವಾಹನದ ಸಂಪೂರ್ಣ ಭಾಗಗಳನ್ನು ತಯಾರಿಸಿದ್ದಾರೆ.

ಪ್ರಾಂಶುಪಾಲರು ಹಾಗೂ ಕಿರಿಯ ತರಬೇತಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಪಾಠಿಗಳ ಸಹಕಾರದಿಂದ ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಲು ಸಾಧ್ಯವಾಗಿದೆ.
–ಮೂರ್ತಿಶೇಷ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ವಿದ್ಯಾರ್ಥಿ
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಆಸಕ್ತಿ ಹಾಗೂ ಅನ್ವೇಷಣಾ ಮನೋಭಾವ ಇದ್ದರೆ ಸೋಲಾರ್ ಎಲೆಕ್ಟ್ರಿಕ್ ವಾಹನದಂತಹ ವಿನೂತನ ಆವಿಷ್ಕಾರಗಳ ಸಾಧನೆ ಸಾಧ್ಯ
–ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.