ಕವಿತಾಳ: ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು ಹಗಲು ರಾತ್ರಿ ದಾಂಗುಡಿ ಇಡುತ್ತಿರುವ ಸೊಳ್ಳೆಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಡೆಂಗಿ, ಮಲೇರಿಯಾ ಹರಡುವ ಭೀತಿ ಕಾಡುತ್ತಿದ್ದರೂ ಸ್ಥಳೀಯ ಆಡಳಿತ ಫಾಗಿಂಗ್ ಮಾಡಿ ಸೊಳ್ಳೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇಲ್ಲಿನ 14 ವಾರ್ಡ್‌ಗಳಲ್ಲಿ ಬಹುತೇಕ ಕಡೆ ಚರಂಡಿಗಳು ತುಂಬಿ ಹರಿಯುತ್ತಿದ್ದು ರಸ್ತೆ ಮೇಲೆ ನೀರು ಸಂಗ್ರಹ, ಸ್ವಚ್ಛತೆ ಕೊರತೆ, ಕೆಲವು ಓಣಿಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತದೆ. ಕಳೆದ ಒಂದು ತಿಂಗಳಿಂದ ಈಚೆಗೆ ಸೊಳ್ಳೆಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿವೆ.
’ಸಾರ್ವಜನಿಕರು ಮತ್ರವಲ್ಲದೇ ಸೊಳ್ಳೆ ಕಾಟದಿಂದ ಜಾನುವಾರು ರಕ್ಷಣೆಗೆ ದೊಡ್ಡ ಗಾತ್ರದ ಸೊಳ್ಳೆ ಪರದೆ ಖರೀದಿ ಮಾಡುವುದು ಅನಿವಾರ್ಯವಾಗಿದೆ, ಮನೆ, ಕಚೇರಿ ಮತ್ತಿತರ ಕಡೆ ಹಗಲು ರಾತ್ರಿ ಎನ್ನದೇ ಸೊಳ್ಳೆ ನಿರೋಧಕ ಔಷಧಿ ಬಳಸುವುದು ಅನಿವಾರ್ಯವಾಗಿದೆ’ ಎಂದು ಮೌನೇಶ ಹೇಳಿದರು.
ʼಮುಖ್ಯ ರಸ್ತೆ ಬದಿ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು ಚರಂಡಿಯ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕಿದ ಪರಿಣಾಮ ಅದನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲ ಹೀಗಾಗಿ ಫಾಗಿಂಗ್ ಮೂಲಕವೇ ಸೊಳ್ಳೆ ನಿಯಂತ್ರಣ ಮಾಡಬೇಕಿದೆ. ಆದರೆ ಸ್ಥಳಿಯ ಆಡಳಿತ ಈ ಬಗ್ಗೆ ಗಮನಹರಿಸುತ್ತಿಲ್ಲ, ಫಾಗಿಂಗ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಬೇಕುʼ ಎಂದು ದಲಿತ ಸಂಘಟನೆ ಮುಖಂಡ ಯಾಕೂಬ ಕಡತಲ್ ಒತ್ತಾಯಿಸಿದರು.
ಸೊಳ್ಳೆಗಳ ನಿಯಂತ್ರಣಕ್ಕೆ ತಕ್ಷಣ ಫಾಗಿಂಗ್ ಆರಂಭಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆ, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದುʼ ಎಂದು ಭೀಮ್ ಆರ್ಮಿ ಸಂಘಟನೆ ಕವಿತಾಳ ಹೋಬಳಿ ಘಟಕದ ಅಧ್ಯಕ್ಷ ಆಜಪ್ಪ ಬುಳ್ಳಾಪುರ ಎಚ್ಚರಿಕೆ ನೀಡಿದ್ದಾರೆ.
ಕೆಲವು ವಾರ್ಡ್ ಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಶೀಘ್ರ ಎಲ್ಲಾ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡುವಂತೆ ಸಿಬ್ಬಂದಿಗೆ ಸೂಚಿಸುತ್ತೇನೆಜಗನ್ನಾಥ ಮುಖ್ಯಾಧಿಕಾರಿ ಕವಿತಾಳ ಪಟ್ಟಣ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.