ರಾಯಚೂರು: ತಾಲ್ಲೂಕಿನ ಆತ್ಕೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ₹5.20 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅತ್ಕೂರು ಗ್ರಾಮ ಪಂಚಾಯಿತಿ ಸಹಕಾರದಿಂದ ನಿರ್ಮಾಣ ಆಗಿರುವ ಹೈಟೆಕ್ ಶೌಚಾಲಯ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಈ ಮೊದಲು ಒಂದು ಚಿಕ್ಕದಾದ ಶೌಚಾಲಯ ಇತ್ತು. ಅದನ್ನು ಶಿಕ್ಷಕರು ಹೆಚ್ಚು ಉಪಯೋಗಿಸಿಸುತ್ತಿದ್ದರು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿರದೇ ಮತ್ತು ಚಿಕ್ಕದಾಗಿರುವುದರಿಂದ ವಿದ್ಯಾರ್ಥಿಗಳು ಉಪಯೋಗ ಮಾಡಲು ಬಹಳ ತೊಂದರೆಯಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಶೌಚಕ್ಕಾಗಿ ಹೊರಗಡೆ ಹೋಗುವುದು ಅನಿವಾರ್ಯವಾಗಿತ್ತು.
‘ನಮ್ಮ ಶಾಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಹೈಟೆಕ್ ಶೌಚಾಲಯ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಮಾಡಿರುವುದರಿಂದ ನಮಗೆ ತುಂಬಾ ಅನುಕೂಲವಾಗಿದೆ’ ಎಂದು ವಿದ್ಯಾರ್ಥಿನಿಯರಾದ ಪ್ರತಿಭಾ, ಮೋನಿಕಾ, ಗೌರಮ್ಮ, ಗಂಗೋತ್ರಿ ಹಾಗೂ ಉದಯಕುಮಾರ, ಕಿಶೋರ, ವಿಕಾಸ ಸಂತಸ ವ್ಯಕ್ತಪಡಿಸಿದರು.
ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಲ್ಲಿ ಹಾಗೂ ಕೈ ತೊಳೆಯಲು ಸಿಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಶೌಚಾಲಯದ ಬಳಕೆಯ ಮಹತ್ವ ಹಾಗೂ ಶುಚಿತ್ವದ ಕುರಿತು ಒತ್ತು ನೀಡಲಾಗಿದೆ. ಶೌಚಾಲಯದ ಹೊರ ಗೋಡೆಗಳಿಗೆ ಸ್ವಚ್ಛತೆ, ಪರಿಸರದ ಮಹತ್ವ ಕುರಿತು ಗೋಡೆ ಬರಹ ಹಾಗೂ ಗೊಂಬೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ನೀರಿನ ಪೊರೈಕೆಗೆ ಒತ್ತು ನೀಡಿ ಶೌಚಾಲಯದ ಮೇಲೆ ಸಿಂಟೆಕ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಹೈಟೆಕ್ ಶೌಚಾಲಯಕ್ಕೆ ವರ್ಣರಂಜಿತ ಟೈಲಿಸ್ ಅಳವಡಿಸಲಾಗಿದೆ.
ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 366 ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಾಲಯಗಳು ಉಪಯೋಗ ಆಗಲಿವೆ. ನರೇಗಾ ಅನುದಾನದಲ್ಲಿ ನಿರ್ಮಿಸಿದ್ದು, ವಿದ್ಯಾರ್ಥಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.-ಬಸವರಾಜ, ಶಾಲಾ ಮುಖ್ಯಶಿಕ್ಷಕ
ನರೇಗಾ ಯೋಜನೆಯ ಮುಖಾಂತರ, ಶಾಲಾ ಅಭಿವೃದ್ಧಿ ಕಾಮಗಾರಿಗಳಡಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅವಕಾಶ ನೀಡಲಾಗಿದೆ.-ಚಂದ್ರಶೇಖರ ಪವಾರ್, ತಾ.ಪಂ ಇಒ, ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.