ADVERTISEMENT

ಶಕ್ತಿನಗರ: ಕೋವಿಡ್‌ ಹರಡುವ ಭೀತಿ, ಭತ್ತ ನಾಟಿಗೆ ಅನ್ಯ ರಾಜ್ಯದ ಕಾರ್ಮಿಕರು!

ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಉಮಾಪತಿ ಬಿ.ರಾಮೋಜಿ
Published 11 ಡಿಸೆಂಬರ್ 2021, 19:30 IST
Last Updated 11 ಡಿಸೆಂಬರ್ 2021, 19:30 IST
ಶಕ್ತಿನಗರದ 1ನೇ ಕ್ರಾಸ್‌ನಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಮಹಿಳೆಯರು ಕುಳಿತಿದ್ದು ಕಂಡುಬಂದಿತು
ಶಕ್ತಿನಗರದ 1ನೇ ಕ್ರಾಸ್‌ನಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಮಹಿಳೆಯರು ಕುಳಿತಿದ್ದು ಕಂಡುಬಂದಿತು   

ಶಕ್ತಿನಗರ: ಕೋವಿಡ್ ರೂಪಾಂತರಿ ಸೋಂಕು ಹರಡುವ ಭೀತಿ ಇದು, ಇದರ ನಡುವೆಯೇ ಶಕ್ತಿನಗರದ ಸುತ್ತಮುತ್ತಲಿನ ಜಮೀನುಗಳಲ್ಲಿ ಭತ್ತ ನಾಟಿ ಮಾಡಲು, ಪಶ್ಚಿಮ ಬಂಗಾಳ, ದೆಹಲಿ, ಉತ್ತರಾಖಂಡ ರಾಜ್ಯಗಳಿಂದ ಜನರು ಬರುತ್ತಿದ್ದಾರೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಶಕ್ತಿನಗರದ ಗಡಿಯಲ್ಲಿ ಕಟ್ಟುನಿಟ್ಟಿನ ನಿಯಮಗಳು ಇನ್ನೂ ಜಾರಿಯಾಗದ ಪರಿಣಾಮ ಜನರಲ್ಲಿ ಆತಂಕ ಮೂಡಿಸಿದೆ. ಕೋವಿಡ್ 1ನೇ ಮತ್ತು 2ನೇ ಅಲೆಯ ವೇಳೆ ತೋರಿದ ಬೇಜಬ್ದಾರಿತನದಿಂದಾಗಿ, ಈಗಲೂ ಜಿಲ್ಲಾಡಳಿತ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ದೇವಸೂಗೂರು ಜಿಲ್ಲಾ ಪಂಚಾಯಿತಿ ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ನದಿ ದಡದ ಹಳ್ಳಿಗಳ ರೈತರು, ಭತ್ತದ ನಾಟಿ ಮಾಡಲು ಮುಂದಾಗಿದ್ದಾರೆ. ಈ ಭಾಗದಲ್ಲಿ ಕೂಲಿಕಾರರು ಸಿಗದ ಕಾರಣ, ಬೇರೆ ರಾಜ್ಯಗಳಿಂದ ತಂಡೋಪ ತಂಡವಾಗಿ ಕೂಲಿಕಾರರನ್ನು ಕರೆಯಿಸಿಕೊಳ್ಳುತ್ತಿದ್ದಾರೆ.

ADVERTISEMENT

ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯದಿಂದ 60 ಜನ. ಶನಿವಾರ ದೆಹಲಿ ಮತ್ತು ಉತ್ತರಖಂಡ್‌ ರಾಜ್ಯದಿಂದ 50 ಜನ ಸೇರಿ ಒಟ್ಟು 110 ಜನ ಆಗಮಿಸಿದ್ದಾರೆ.

‘ರೈಲು ಮೂಲಕ ಹೈದರಾಬಾದ್‌ಗೆ ತಲುಪಿದೆವು. ಅಲ್ಲಿಂದ ಬಸ್‌ಗಳ ಮೂಲಕ ಶಕ್ತಿನಗರಕ್ಕೆ ಬಂದಿದ್ದೇವೆ. ಯಾವುದೇ ಚೆಕ್‌ಪೋಸ್ಟ್‌ನಲ್ಲಿ ನಮ್ಮನ್ನು ಯಾರು ತಪಾಸಣೆ ಮಾಡಿಲ್ಲ’ ಎಂದು ದೆಹಲಿ ರಾಜ್ಯದಿಂದ ಆಗಮಿಸಿದ ಕೂಲಿಕಾರ ಸುನೀಲ ಹೇಳಿದರು.

‘ಕೆಲಸ ಮಾಡುವ ಜಮೀನುಗಳಲ್ಲಿ ಸಣ್ಣದೊಂದು ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತೇವೆ. ಭತ್ತದ ನಾಟಿ ಮುಗಿಯುವರೆಗೂ ಇರುತ್ತೇವೆ. ನಾಟಿ ಹಚ್ಚಲು ಎಕರೆಗೆ ₹ 3,500 ಪಡೆಯುತ್ತೇವೆ. ಒಟ್ಟು 300 ರಿಂದ 400 ಎಕರೆಯ ಜಮೀನುಗಳನ್ನು ಗುತ್ತಿಗೆ ಪಡೆದಿದ್ದೇವೆ’ ಎಂದು ಪಶ್ಚಿಮ ಬಂಗಾಳಿ ರಾಜ್ಯದ ಕೂಲಿಕಾರ ವಾಸೀಮ್ ಹೇಳಿದರು.

‘ಹೈದರಾಬಾದ್ ಮೂಲಕ ಮಹಾರಾಷ್ಟ್ರ, ಕೇರಳ, ಪಶ್ಚಿಮಬಂಗಾಳ, ದೆಹಲಿ, ಉತ್ತರಾಖಂಡ್‌ ರಾಜ್ಯಗಳಿಂದ ಜನ ಬರುತ್ತಿದ್ದರೂ ಕೂಡ, ಜಿಲ್ಲೆಯ ಗಡಿ ಪ್ರದೇಶದಲ್ಲಿ ಅಧಿಕಾರಿಗಳು ಅವರ ಆರೋಗ್ಯ ತಪಾಸಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಬೇರೆ ರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್‌ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಪಡೆದಿರಬೇಕು. ಅದನ್ನು ಪರಿಶೀಲಿಸಿದ ನಂತರದಲ್ಲಿ ಅವರನ್ನು ರಾಜ್ಯದೊಳಗೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸರ್ಕಾರ ಸೂಚಿಸಿದೆ. ಆದರೂ, ಶಕ್ತಿನಗರದ ಗಡಿಯಲ್ಲಿ ಯಾವುದೇ ತಪಾಸಣೆ ಗೊಳಪಡಿಸದಿರುವುದು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.