ರಾಯಚೂರಿನ ಜಿಲ್ಲಾ ಪೊಲೀಸ್ ಕಚೇರಿ ಎದುರು ಶಿವರಾಜ ಪಾಟೀಲ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ರಾಯಚೂರು: 'ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಗೆ ದೂರು ಕೊಡಲು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಹೊಡೆದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾ ಪೋಲಿಸ್ ಕಚೇರಿ ಎದುರು ಕುಟುಂಬದ ಸದಸ್ಯರು ಹಾಗೂ ಶಾಸಕ ಶಿವರಾಜ ಪಾಟೀಲ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಐಬಿ ರಸ್ತೆ ಈಶ್ವರನಗರದ ನಿವಾಸಿ 27 ವರ್ಷದ ವೀರೇಶ ನಾಯಕ ಅವರನ್ನು ಮೂರು ಪೊಲೀಸ್ ಠಾಣೆಗಳಲ್ಲಿ (ಮಹಿಳಾ ಠಾಣೆ, ಸದರ್ ಬಜಾರ್, ಪಶ್ಚಿಮ ಪೊಲೀಸ್ ಠಾಣೆ) ಹೊಡೆಯಲಾಗಿದೆ. ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಬೇಕು. ಅವರ ಕುಟುಂಬಕ್ಕೆ ₹2 ಕೋಟಿ ಪರಿಹಾರ ಕೊಡಿಸಬೇಕು ಎಂದು ಶಾಸಕ ಶಿವರಾಜ ಪಾಟೀಲ ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪರಿಶಿಷ್ಟ ಪಂಗಡದವರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪೊಲೀಸರು ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನನ್ನ ಸಹೋದರನ ಅತ್ತೆ ಪೊಲೀಸರಿಗೆ ದೂರು ಕೊಟ್ಟಿದ್ದರು. ವಿಚಾರಣೆ ನೆಪದಲ್ಲಿ ಕರೆಸಿ ಹಲ್ಲೆ ಮಾಡಲಾಗಿದೆ. ಅವನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಸಹೋದರನ ಸಾವಿಗೆ ಪೊಲೀಸರೇ ಕಾರಣ’ ಎಂದು ವೀರೇಶನ ಸಹೋದರಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.
ವೀರೇಶನ ಸಂಬಂಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.