ADVERTISEMENT

ಮೊಲಗಳ ಬೇಟೆ: ಶಾಸಕ ಬಸನಗೌಡ ತುರ್ವಿಹಾಳ ಸಹೋದರ, ಪುತ್ರನ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 13:14 IST
Last Updated 1 ಏಪ್ರಿಲ್ 2025, 13:14 IST
   

ರಾಯಚೂರು: ಸಿಂಧನೂರು ತಾಲ್ಲೂಕಿನ ‌ತುರ್ವಿಹಾಳ ಪಟ್ಟಣದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರ ಪುತ್ರ ಹಾಗೂ ಸಹೋದರ ವಿರುದ್ಧ ಯುಗಾದಿ ದಿನ ಬೇಟೆಯಾಡಿದ ಮೊಲಗಳನ್ನು ಕೊಡಲಿ ಹಾಗೂ ಭರ್ಜಿಗೆ ಸಿಕ್ಕಿಸಿಕೊಂಡು ಮೆರವಣಿಗೆ ಮಾಡಿದ ಆರೋಪದಡಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಶಾಸಕರ ಪುತ್ರ ಆರ್‌.ಸತೀಶಗೌಡ ತುರ್ವಿಹಾಳ, ಸಹೋದರ ಸಿದ್ದನಗೌಡ ತುರ್ವಿಹಾಳ ಹಾಗೂ ಇತರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಯಚೂರು ಡಿಸಿಎಫ್‌ ಪ್ರವೀಣ ತಿಳಿಸಿದ್ದಾರೆ.

ಸಾವಿರಾರು ಜನರ ಎದುರೇ ಕೊಡಲಿಗೆ ಮೊಲಗಳನ್ನು ಸಿಕ್ಕಿಸಿಕೊಂಡು ವಿಜೃಂಭಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲವರು ಕೊಡಲಿಗಳಿಗೆ ಮೊಲಗಳನ್ನು ತೂಗು ಹಾಕಿ ಹಿಂಸೆ ನೀಡಿರುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ADVERTISEMENT

‘ಯುಗಾದಿ ಹಬ್ಬದಲ್ಲಿ ಕೆಲವು ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಕುಟುಂಬದ ಸದಸ್ಯರು ಮೊಲಗಳನ್ನು ಬೇಟೆಯಾಡಿಲ್ಲ. ಆದರೆ, ಮೆರವಣಿಗೆಯಲ್ಲಿ ಬಂದ ಯುವಕರು ನಮ್ಮವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ ಅಷ್ಟೇ’ ಎಂದು ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ಬಸನಗೌಡ ತುರ್ವಿಹಾಳ ಪ್ರತಿಕ್ರಿಯಿಸಿದ್ದಾರೆ.

‘ಮೊಲಗಳನ್ನು ಬೇಟೆಯಾಡುವುದು ತಪ್ಪು. ಇಂಥ ಕೃತ್ಯಗಳನ್ನು ನಡೆಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು’ ಎಂದು ಹೇಳಿದ್ದಾರೆ. 

‘ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದವರು ಯಾರೇ ಇದ್ದರೂ ಅವರನ್ನು ರಕ್ಷಣೆ ಮಾಡುವುದಿಲ್ಲ. ಬೇಟೆಯಾಡಿದ್ದರೆ ಶಾಸಕರ ಪುತ್ರ ಹಾಗೂ ಸಹೋದರನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅರಣ್ಯ ಇಲಾಖೆ ಸಚಿವ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.