ಎಸ್. ಆರ್. ಹಿರೇಮಠ
ರಾಯಚೂರು: ‘ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು ಹಾಗೂ ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎಂದು ಜನಾಂದೋಲನಾ ಮಹಾಮೈತ್ರಿಯ ರಾಜ್ಯ ಸಂಚಾಲಕ ಎಸ್. ಆರ್. ಹಿರೇಮಠ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ರಾಜ್ಯ ಸರ್ಕಾರ ಇದುವರೆಗೆ ವಾಪಸ್ ತೆಗೆದುಕೊಂಡಿಲ್ಲ. ಹಿಂಪಡೆಯದಿದ್ದರೆ ಜನಜಾಗೃತಿ ಹೋರಾಟ ನಡೆಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ರೈತ,ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ತಿದ್ದುಪಡಿ ಕಾಯ್ದೆ ಹಿಂಪಡೆದಿತ್ತು. ರಾಜ್ಯದಲ್ಲಿದ್ದ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕಾಯ್ದೆ ಹಿಂಪಡೆಯದೇ ಮೊಂಡುತನ ಪ್ರದರ್ಶಿಸಿತ್ತು. ವಿಧಾಸಭೆ ಪೂರ್ವದಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಕಾಯ್ದೆಗಳನ್ನು ಹಿಂಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಜನವರಿ 8 ರಂದು ಜನಾಂದೋಲನಾ ಮಹಾಮೈತ್ರಿ ಯಿಂದ ಸರ್ವಾನುಮತದಿಂದ ಸಭೆ ಕರೆದು ಮೂರು ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಪತ್ರ ಬರೆದಿದ್ದೇವೆ. ಮುಖ್ಯಮಂತ್ರಿ ಅವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದು ಆಶಾದಾಯಕ ಬೆಳವಣಿಗೆಯ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕುಂಭಮೇಳದಲ್ಲಿ ಸಂವಿಧಾನ ಬದಲಾಯಿಸಿ ಬೇರೆ ಸಂವಿಧಾನ ರಚಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಸಂವಿಧಾನ ಬದಲಾವಣೆ ಅಸಾಧ್ಯದ ಮಾತು. ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಬದಲಾಯಿಸುವ ಆಲೋಚನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜನಾಂದೋಲನಾ ಮಹಾಮೈತ್ರಿಯ ಜಿಲ್ಲಾ ಸಂಚಾಲಕ ಖಾಜಾ ಅಸ್ಲಂ ಅಹ್ಮದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.