ರಾಯಚೂರು: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ನಿತ್ಯ ಬಳಕೆಯ ಈರುಳ್ಳಿ ಹಾಗೂ ಮೆಣಸಿನಕಾಯಿ ಈ ವಾರ ಗ್ರಾಹಕರಿಗೆ ಬಿಸಿಮುಟ್ಟಿಸಿವೆ.
ಪ್ರತಿ ಕ್ವಿಂಟಲ್‌ಗೆ ಬೀನ್ಸ್ ಬೆಲೆ ₹ 4 ಸಾವಿರ ಕಡಿಮೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ಹಿರೇಕಾಯಿ, ಟೊಮೆಟೊ ₹ 2 ಸಾವಿರ, ಚವಳೆಕಾಯಿ, ಸೌತೆಕಾಯಿ, ಈರುಳ್ಳಿ, ಬದನೆಕಾಯಿ ದರ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ.
ಮೆಣಸಿನಕಾಯಿ, ಡೊಣಮೆಣಸಿನಕಾಯಿ ಹಾಗೂ ಚವಳೆಕಾಯಿ ಪ್ರತಿ ಕೆಜಿಗೆ ₹80 ಮಾರಾಟವಾಗುತ್ತಿದೆ. ಮಳೆಯಿಂದಾಗಿ ಪ್ರಮುಖ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಬೆಳ್ಳುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ಬೀಟ್‌ರೂಟ್, ಬೆಂಡೆಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದೆ.
ನಗರದ ತರಕಾರಿ ಸಗಟು ಮಾರುಕಟ್ಟೆಗೆ ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ, ಬೈಲಹೊಂಗಲ ಹಾಗೂ ಗೋಕಾಕ ತಾಲ್ಲೂಕಿನಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಜಿಲ್ಲೆಯ ಗಡಿ ಗ್ರಾಮಗಳಿಂದ ಹಿರೇಕಾಯಿ, ಟೊಮೆಟೊ, ಚವಳೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಬಂದಿದೆ.
‘ಒಂದು ವಾರದಿಂದ ಸುರಿಯುತ್ತಿರುವ ಮಳೆ ತರಕಾರಿ ಬೆಲೆಯಲ್ಲಿ ಏರಿಳಿತ ಉಂಟು ಮಾಡಿದೆ. ಗಡಿ ಗ್ರಾಮಗಳಿಂದ ಕಡಿಮೆ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸ್ಪಲ್ಪ ಮಟ್ಟಿಗೆ ಬೆಲೆ ಜಾಸ್ತಿ ಇದೆ’ ಎಂದು ತರಕಾರಿ ವ್ಯಾಪಾರಿ ಲಿಂಗೇಶ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.